ಬೆಳ್ಮಣ್: ಆಸ್ತಿಯ ನಕಲಿ ದಾಖಲೆ ಸೃಷ್ಟಿಸಿ ನಾಲ್ವರು ಸಹೋದರಿಯರಿಗೆ ವಂಚಿಸಿದ ಸಹೋದರ
ಕಾರ್ಕಳ ಮೇ.1(ಉಡುಪಿ ಟೈಮ್ಸ್ ವರದಿ): ಪಿತ್ರಾರ್ಜಿತವಾಗಿ ಸೇರಬೇಕಾದ ಆಸ್ತಿಯನ್ನು ಲಪಟಾಯಿಸುವ ಉದ್ದೇಶದಿಂದ ನಾಲ್ವರು ಸಹೋದರಿಯರಿದ್ದರೂ ತಂದೆ ತಾಯಿಗೆ ಒಬ್ಬನೇ ಮಗ ಎಂದು ನಕಲಿ ದಾಖಲೆ ಸೃಷ್ಟಿಸಿ ವಂಚಿಸಿರುವ ಬಗ್ಗೆ ಸೂಡಾ ಗ್ರಾಮದ ಶಂಕರ ಮೇರ ಎಂಬಾತನ ವಿರುದ್ಧ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಭಾಗಿರತಿ ಎಂಬವರು ತಮ್ಮ ಸಹೋದರ ಶಂಕರ ಮೇರ ಎಂಬಾತನ ವಿರುದ್ಧ ದೂರು ದಾಖಲಿಸಿದ್ದಾರೆ. ಕಾರ್ಕಳದ ಮಾಯಿಲ ಅಸ್ಲರ್ ಯಾನೆ ಮಾಯಿಲ ಮೇರ ಇವರಿಗೆ ಗುಲಾಬಿ, ಭವಾನಿ, ವಿನೋದ, ಭಾಗಿರತಿ ಹಾಗೂ ಶಂಕರ ಮೇರ ಎಂಬ ಐದು ಜನ ಮಕ್ಕಳಿದ್ದು, ಇವರು ಕಾರ್ಕಳದ ಸೂಡಾ ಗ್ರಾಮದಲ್ಲಿ ಸರ್ವೆ ನಂಬರ್ 224 /1 ರಲ್ಲಿ 2 ಎಕರೆ 26 ಸೆಂಟ್ಸ್ ಜಾಗ ಹೊಂದಿದ್ದರು. ಇವರು ತಮ್ಮ ಆಸ್ತಿಗೆ ಸಂಬಂಧಿಸಿ ಜೀವಿತಾವಧಿ ಯಲ್ಲಿ ಯಾವುದೇ ರಿಜಿಸ್ಟ್ರೀ ದಾಖಲೆಗಳನ್ನು ಮಾಡಿರುವುದಿಲ್ಲ.
ಇವರ ಮರಣಾನಂತರ ಇವರ ಮಗನಾದ ಶಂಕರ ಮೇರ ತಂದೆ ತಾಯಿಗೆ ತಾನೊಬ್ಬನೇ ಮಗ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ತಂದೆಯಿಂದ ಬರೆಬೇಕಿದ್ದ ಆಸ್ತಿಯನ್ನು ಒಬ್ಬನೇ ಹಕ್ಕುದಾರನನ್ನಾಗಿ ಬಿಂಬಿಸಿದ್ದಾನೆ. ಹಾಗೂ ಈತನ ಈ ಕೃತ್ಯಕ್ಕೆ ತಂದೆಯ ಅವಧಿಯಲ್ಲಿ ಗ್ರಾಮಕರಣಿಕರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಇವರ ಕುಟುಂಬಕ್ಕೆ ಆಪ್ತರೆನಿಸಿಕೊಂಡಿದ್ದ ಗ್ರಾಮ ಸಹಾಯಕರಾದ ರಮೇಶ್ ದೇವಾಡಿಗ ಅವರೂ ಕುಟುಂಬದ ಬಗ್ಗೆ ಎಲ್ಲ ಮಾಹಿತಿ ಇದ್ದರೂ ಕೂಡ ಶಂಕರ ಮೇರ ಅವರಿಗೆ ನಕಲಿ ದಾಖಲೆ ಸೃಷ್ಟಿಸುವಲ್ಲಿ ಸಹಕಾರ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಾಯಿಲ ಮೇರ ಹಾಗೂ ನರ್ಸಿ ಮೊಸೆರ್ತಿ ದಂಪತಿಗೆ ಶಂಕರ ಮೇರ ಒಬ್ಬನೇ ಮಗ ಎಂದು ಪ್ರಮಾಣ ಪತ್ರ ನೀಡುವಲ್ಲಿ ಸ್ಥಳೀಯರಾದ ಬೆಂಜಮಿನ್ ಡಿಸೋಜ ಸೂಡ, ಜಯರಾಮ್ ಶೆಟ್ಟಿ ಸೂಡ, ಸೂರಜ್ ಕುಲಾಲ್ ಸೂಡ, ಚಂದ್ರಕಲಾ ಜೋಗಿ ಸೂಡ, ರಮೇಶ್ ಜೋಗಿ ಸೂಡ ಅವರು ಸಹಿ ಹಾಕಿ ಸುಳ್ಳು ಸಾಕ್ಷಿ ನೀಡುವ ಮೂಲಕ ಸುಳ್ಳು ದಾಖಲೆ ಮಾಡಲು ಸಹಕರಿಸಿ, ಪಂಚನಾಮೆಗೆ ಸಹಿ ಹಾಕಿದ್ದಾರೆ. ಆರೋಪಿಯ ವಿರುದ್ಧಐಪಿಸಿ ಕಲಂ 406, 465, 468 ರಂತೆ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಮಾಹಿತಿ ತಿಳಿದ ಭಗೀರಥಿ ಅವರು ದಾಖಲೆಗಳನ್ನು ತಾಲೂಕು ಕಚೇರಿಯಿಂದ ತೆಗೆಸಿ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಲಾಗಿದೆ. ನಕಲಿ ದಾಖಲೆ ಸೃಷ್ಟಿಸುವಲ್ಲಿ ಮಾಜಿ ಪಂಚಾಯತ್ ಸದಸ್ಯರೊಬ್ಬರು ಸಹಕಾರ ನೀಡಿದ್ದಾರೆ ಎಂದು ದೂರುದಾರರು ಸಂದೇಹ ವ್ಯಕ್ತಪಡಿಸಿದ್ದಾರೆ.