ಉಡುಪಿ: ಹೆಡ್ ಕಾನ್ಸ್ಟೇಬಲ್ ರಾಜೇಶ್ ಕುಂದರ್ ಆತ್ಮಹತ್ಯೆ ಪ್ರಕರಣ ಹೊಸ ತಿರುವು
ಉಡುಪಿ ಮೇ.1(ಉಡುಪಿ ಟೈಮ್ಸ್ ವರದಿ): ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಹೆಡ್ ಕಾನ್ಸ್ಟೇಬಲ್ ರಾಜೇಶ್ ಕುಂದರ್ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಇದೀಗ ಪ್ರಕರಣಕ್ಕೆ ಸಂಬಂಧಿಸಿ ರಾಜೇಶ್ ಕುಂದರ್ ಅವರು ಬರೆದಿರುವ ಡೆತ್ ನೋಟ್ ಲಭ್ಯವಾಗಿದ್ದು, ಈ ಡೆತ್ ನೋಟ್ ನಲ್ಲಿ ಡಿಎಆರ್ ಎಸಿಪಿ ಉಮೇಶ್, ಅಸ್ಪಕ್ ಹಾಗೂ ಗಂಗೊಳ್ಳಿ ಠಾಣಾ ಪಿಎಸ್ಐ ನಂಜಾ ನಾಯ್ಕ ಹಾಗೂ ಇನ್ನೋರ್ವ ವ್ಯಕ್ತಿ ತನ್ನ ಸಾವಿಗೆ ಕಾರಣ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಗೆ ಪ್ರಚೋದನೆ ನೀಡಿರುವ ಆರೋಪದ ಮೇಲೆ ಈ ಮೂವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಗೂ ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವ ನಾಲ್ಕನೇ ಇನ್ನೋರ್ವ ವ್ಯಕ್ತಿ ಪೊಲೀಸ್ ಇಲಾಖೆಯ ಮೇಲಾಧಿಕಾರಿ ಎಂಬುದರ ಬಗ್ಗೆಯೂ ಅನುಮಾನಗಳು ಹುಟ್ಟಿಕೊಂಡಿದ್ದು ಈ ಬಗ್ಗೆ ತನಿಖೆ ನಡೆಸಲು ಸಿದ್ಧತೆಗಳು ನಡೆಯುತ್ತಿದೆ ಎನ್ನಲಾಗುತ್ತಿದೆ. ಆರಂಭದಲ್ಲಿ ಘಟನೆ ಆಕಸ್ಮಿಕ ಸಾವು ಎಂದು ಶಂಕಿಸಲಾಗಿತ್ತಾದರೂ ರೈಫಲ್ ಲಾಕ್ ಮಾಡುವ ವ್ಯವಸ್ಥೆ ಇರುವುದರಿಂದ ಆತ್ಮಹತ್ಯೆ ಇರಬೇಕು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ಈ ನಡುವೆ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ಘಟನೆಗೆ ಸಂಬಂಧಿಸಿ ಡೆತ್ ನೋಟ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಅರೋಪದ ಮೇಲೆ ಪ್ರಕರಣ ದಾಖಲಾಗಿದೆ. ಡೆತ್ ನೋಟನ್ನು ಹ್ಯಾಂಡ್ ರೈಟಿಂಗ್ ತಜ್ಞರಿಗೆ ಪರಿಶೀಲನೆಗೆ ಕಳುಹಿಸಲಾಗಿದೆ ಹಾಗೂ ರಾಜೇಶ್ ಅವರ ಆತ್ಮಹತ್ಯೆ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ರಾಜೇಶ್ ಕುಂದರ್ ಅವರ ಜೊತೆ ರಾತ್ರಿಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಗಣೇಶ್ ಎಂಬುವರು ಎಂದಿನಂತೆ ಕಚೇರಿಗೆ ತೆರಳಿ ತಮ್ಮ ಬ್ಯಾಗ್ ಪರಿಶೀಲಿಸುತ್ತಿದ್ದಾಗ ಒಂದು ಹಾಳೆಯಲ್ಲಿ ರಾಜೇಶ್ ಅವರು ಬರೆದ ಡೆತ್ ನೋಟ್ ಪತ್ತೆಯಾಗಿದೆ.
ಇದನ್ನು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದಿ ಉಡುಪಿಯ ಶಾಲೆಯಲ್ಲಿ ಎಸೆಸೆಲ್ಸಿ ಅಂತಿಮ ಪರೀಕ್ಷೆಯ ಉತ್ತರ ಪತ್ರಿಕೆಯ ಭದ್ರತಾ ಕರ್ತವ್ಯಕ್ಕೆ ನಿಯೋಜನೆ ಗೊಂಡಿದ್ದ ಅವರು ಉತ್ತರ ಪತ್ರಿಕೆ ಇರಿಸಲಾದ ಸ್ಟ್ರಾಂಗ್ ರೂಮ್ ನ ಎದುರು ಕುಳಿತ ಸ್ಥಿತಿಯಲ್ಲೇ ಗುಂಡು ಹಾರಿದಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 300 ಯಾರ್ಡ್ ರೇಂಜ್ ಹೊಂದಿರುವ ರೈಫಲ್ 5 ಬುಲೆಟ್ ಗಳನ್ನು ತುಂಬಿಸುವ ಸಾಮರ್ಥ್ಯವನ್ನು ಹೊಂದಿರುವ 303 ರೈಫಲ್ ರಾಜೇಶ್ ಅವರನ್ನು ಬಲಿಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.