ತೆಂಕನಿಡಿಯೂರು: ಸರಕಾರಿ ಭೂಮಿ ಒತ್ತುವರಿ ತೆರವುಗೊಳಿಸುವಂತೆ ದಸಂಸ ಆಗ್ರಹ
ಉಡುಪಿ ಎ.30(ಉಡುಪಿ ಟೈಮ್ಸ್ ವರದಿ): ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿರುವುದನ್ನು ತೆರವು ಗೊಳಿಸುವಂತೆ ಉಡುಪಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಈ ಬಗ್ಗೆ ದಲಿತ ಸಂಘರ್ಷ ಸಮಿತಿ ಜಿಲ್ಲಾಧಿಕಾರಿಯವರ ಬಳಿ ಮನವಿ ಮಾಡಿಕೊಂಡಿದ್ದು, ಈ ಮನವಿ ಪತ್ರದಲ್ಲಿ ಉಡುಪಿಯ ಕೆಳಾರ್ಕಳಬೆಟ್ಟು ಗ್ರಾಮದ ಸರ್ವೆ ನಂಬೈ: 50ಪಿ1ರಲ್ಲಿ 17 ಎಕ್ರೆ 27 ಸೆಂಟ್ಸ್ ಸರ್ಕಾರಿ ಭೂಮಿಯನ್ನು ಜಮೀನು ಇರುವ ಸುಮಾರು 55 ಕುಟುಂಬಗಳು ಆಕ್ರಮವಾಗಿ ಮನೆ ಕಟ್ಟಿಕೊಂಡಿದ್ದು, ಈ ಜಮೀನಿನ ಹಕ್ಕು ಪತ್ರಕ್ಕಾಗಿ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿರುವುದು ತಿಳಿದು ಬಂದಿದೆ. ಅಲ್ಲದೆ ತೆಂಕನಿಡಿಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದ ಕೃಷ್ಣ ಶೆಟ್ಟಿಯವರು ಪಂಚಾಯತ್ ಪರವಾನಿಗೆ ಪಡೆಯದೆ ಅಕ್ರಮವಾಗಿ ಎರಡು ಆರ್.ಸಿಸಿ, ಮನೆ ಕಟ್ಟಿರುತ್ತಾರೆ. ಅದರಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ನೇರ ಶಾಮೀಲಾಗಿರುತ್ತಾರೆ. ಹಾಗೂ ಈಗಿನ ಅಧ್ಯಕ್ಷೆ ಗಾಯತ್ರಿ ಅವರಿಗೆ ಒತ್ತುವರಿ ಮಾಡಿರುವ ವಿಷಯ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಒತ್ತುವರಿದಾರರ ಜೊತೆ ಕೈ ಜೋಡಿಸಿರುತ್ತಾರೆ. ಹಾಗೂ ಈ ಹಿಂದಿನ ತಹಶೀಲ್ದಾರರು ಮತ್ತು ಕಂದಾಯ ಅಧಿಕಾರಿಗಳು ಸಂಪೂರ್ಣವಾಗಿ ಸಹಕಾರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಾಗೂ ಈ ಹಿಂದೆ ಪರಿಶಿಷ್ಟ ಜಾತಿ/ಪಂಗಡದ ಭೂ ರಹಿತರು ಜಮೀನಿನಲ್ಲಿ ಮನೆ ಕಟ್ಟಕೊಳ್ಳಲು ಹೋದ ಸಂದರ್ಭದಲ್ಲಿ ಪರಿಶಿಷ್ಟವಲ್ಲದ ಕೆಲವರು, ಭೂ ರಹಿತರಾಗಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡವನ್ನು ಅವಮಾನಿಸಿ, ಅಸ್ಪೃಶ್ಯತೆ ತೋರಿರುತ್ತಾರೆ. ಈ ಜಮೀನಿನಲ್ಲಿ ಆರ್ಥಿಕವಾಗಿ ಬಲಾಢ್ಯರಾಗಿರುವ ಮತ್ತು ಎಕರೆಗಟ್ಟಲೆ ಜಮೀನಿರುವವರೇ ಒತ್ತುವರಿ ಮಾಡಿಕೊಂಡು ಕಾನೂನು ಬಾಹಿರವಾಗಿ ಹಕ್ಕುಪತ್ರ ಪಡೆಯಲು ಹೊರಟಿರುವುದು ಅಕ್ಷಮ್ಯ ಅಪರಾಧವಾಗಿದೆ. ಜಮೀನು ಇವರಿಗೆ ಮಂಜೂರುಗೊಳಿಸಿ, ಹಕ್ಕುಪತ್ರ ನೀಡುವುದಕ್ಕೆ ಆಕ್ಷೇಪಿಸಿದೆ. ಈ ಸಂಚಾಯತ್ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಇತರ ಜಾತಿಯವರು ಮನೆ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದರೂ ಈವರೆಗೂ ಒಬ್ಬರಿಗೂ ಮನೆ ನಿವೇಶನ ಮಂಜೂರು ಮಾಡಿರುವುದಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಯವರು ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಸರಕಾರಿ ಭೂಮಿ ಒತ್ತುವರಿ ಮಾಡಿರುವುದನ್ನು ತೆರವು ಗೊಳಿಸಬೇಕೆಂದು ಮನವಿ ಮಾಡಿಕೊಂಡಿದೆ.