ಕ್ಲಾರೆನ್ಸ್ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಕ್ರಿಶ್ಚಿಯನ್ ಮಕ್ಕಳಿಗಷ್ಟೇ ಅಡ್ಮಿಷನ್
ಬೆಂಗಳೂರು ಎ.30: ಇತ್ತೀಚೆಗೆ ಶಾಲೆಯಲ್ಲಿ ಬೈಬಲ್ ಕಲಿಯುವುದನ್ನು ಕಡ್ಡಾಯಗೊಳಿಸಲಾಗಿದೆ ಎಂಬ ಸುದ್ದಿ ಬೆನ್ನಲ್ಲೇ ನಗರದ ರಿಚರ್ಡ್ ಕ್ಲಾರೆನ್ಸ್ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಕ್ರಿಶ್ಚಿಯನ್ ಮಕ್ಕಳಿಗಷ್ಟೇ ಅಡ್ಮಿಷನ್ ಮಾಡಿಕೊಳ್ಳಲಾಗುತ್ತದೆ ಎಂದು ಶಾಲೆಯ ಆಡಳಿತ ಮಂಡಳಿ ಆದೇಶ ಹೊರಡಿಸಿದೆ ಎಂಬ ಸುದ್ದಿ ವರದಿಯಾಗಿದೆ.
ಈ ಬಗ್ಗೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಿ, ಬೈಬಲ್ ಬಗ್ಗೆ ಕ್ರಿಶ್ಚಿಯನ್ ಮಕ್ಕಳಿಗಷ್ಟೆ ನೈತಿಕ ಬೋಧನೆ ಮಾಡಲಾಗ್ತಿತ್ತು. ನಮ್ಮ ಶಾಲೆಯಲ್ಲಿ ಬೈಬಲ್ ನೈತಿಕ ಬೋಧನೆ ಮಾಡುತ್ತಿದ್ದೆವು. ಧರ್ಮ ಬೋಧನೆ ಮಾಡುತ್ತಿರಲಿಲ್ಲ. ಸರ್ಕಾರ ಭಗವದ್ಗೀತೆ ಕಡ್ಡಾಯಗೊಳಿಸಿದರೆ ಸ್ವಾಗತಿಸುತ್ತೇವೆ. ಬೈಬಲ್‍ನಲ್ಲಿ ಪಾಸಿಂಗ್ ಮಾರ್ಕ್ಸ್ ತೆಗೆದುಕೊಳ್ಳಬೇಕು ಎಂದು ಕಡ್ಡಾಯವಿರಲಿಲ್ಲ, ಮಕ್ಕಳು ಪ್ರಶಸ್ತಿ ಪಡೆಯಲಷ್ಟೇ ಮಾಡಿದ್ದಾಗಿತ್ತು. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಕ್ರಿಶ್ಚಿಯನ್ ಮಕ್ಕಳಿಗಷ್ಟೆ ಶಾಲಾ ಅಡ್ಮಿಷನ್‍ಗೆ ಅನುಮತಿ ನೀಡಲಾಗಿದೆ ಎಂದು ಕ್ಲಾರೆನ್ಸ್ ಶಾಲಾ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಇತ್ತೀಚೆಗಷ್ಟೇ ಶಾಲೆಯಲ್ಲಿ ಬೈಬಲ್ ಕಲಿಯುವುದನ್ನು ಕಡ್ಡಾಯಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೇ ಸರ್ಕಾರದಿಂದ ಕ್ಲಾರೆನ್ಸ್ ಶಾಲೆಗೆ ನೋಟಿಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ಕ್ರಿಶ್ಚಿಯನ್ ಮಕ್ಕಳಿಗೆ ಮಾತ್ರ ಪ್ರವೇಶ ನೀಡಿ, ಹಿಂದೂ ಮಕ್ಕಳಿಗೆ ಪ್ರವೇಶ ಮಾಡಿಕೊಳ್ಳದಂತೆ ಶಾಲಾ ಆಡಳಿತ ಮಂಡಳಿ ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ.