ದ್ವೇಷದ ಬುಲ್ಡೋಜರ್ ನಿಲ್ಲಿಸಿ,ಬದಲಿಗೆ ವಿದ್ಯುತ್ ಉತ್ಪಾದನಾ ಘಟಕ ಆರಂಭಿಸಿ- ರಾಹುಲ್ ಗಾಂಧಿ
ನವದೆಹಲಿ: ಪ್ರಸ್ತುತ ದೇಶದಲ್ಲಿನ ವಿದ್ಯುತ್ ಬಿಕ್ಕಟ್ಟಿನ ನಡುವೆ, ಮೋದಿ ಸರ್ಕಾರ ದ್ವೇಷದ ಬುಲ್ಡೋಜರ್ ಕಾರ್ಯಾಚರಣೆ ನಿಲ್ಲಿಸಿ, ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಚಾಲನೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
ದೇಶದಲ್ಲಿ ಕಲ್ಲಿದ್ದಲು ಮತ್ತು ವಿದ್ಯುತ್ ಬಿಕ್ಕಟ್ಟು ತೀವ್ರವಾಗಿರುವುದರಿಂದ ದೇಶ ಹಾಗೂ ಜನರ ಬಗೆಗಿನ ಕಾಳಜಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪ್ರಧಾನಿ ಹೇಳಬೇಕು ಎಂದಿದ್ದಾರೆ. 2022 ಏಪ್ರಿಲ್ 20 ರಂದು ಮೋದಿ ಸರ್ಕಾರ ದ್ವೇಷದ ಬುಲ್ಡೋಜರ್ ನಿಲ್ಲಿಸಿ ವಿದ್ಯುತ್ ಘಟಕ ಆರಂಭಿಸುವಂತೆ ಹೇಳಿದ್ದೆ. ಇಂದು ಕಲ್ಲಿದ್ದಲು ಮತ್ತು ವಿದ್ಯುತ್ ಬಿಕ್ಕಟ್ಟು ದೇಶಾದ್ಯಂತ ತಲೆದೋರಿದೆ. ಮತ್ತೆ ಹೇಳುತ್ತಿದ್ದೇನೆ. ಈ ಬಿಕ್ಕಟ್ಟು ಸಣ್ಣ ಕೈಗಾರಿಕೆಗಳನ್ನು ನಾಶಪಡಿಸಲಿದೆ. ಇದರಿಂದಾಗಿ ಮುಂದೆ ನಿರುದ್ಯೋಗ ಪ್ರಮಾಣ ಹೆಚ್ಚಲಾಗಿದೆ ಎಂದು ಅವರು ಹೇಳಿದ್ದಾರೆ.
ಸಣ್ಣ ಮಕ್ಕಳು ರಣ ಬಿಸಿಲಿಗೆ ನಿಲ್ಲದಂತಾಗಿದೆ. ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳು ಆತಂತ್ರರಾಗಿದ್ದಾರೆ. ರೈಲು, ಮೆಟ್ರೋ ಸೇವೆ ಸ್ಥಗಿತದಿಂದ ಆರ್ಥಿಕ ನಷ್ಟ ಉಂಟಾಗಲಿದೆ ಎಂದು ರಾಹುಲ್ ಗಾಂಧಿ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಫೋಸ್ಟ್ ಮಾಡಿದ್ದಾರೆ. ಮೋದಿ ಸರ್ಕಾರ ಸಮರ್ಪಕ ರೀತಿಯಲ್ಲಿ ದೇಶಾದ್ಯಂತ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಕಲ್ಲಿದ್ದಲು ಪೂರೈಸದೆ ಇರುವುದರಿಂದ ವಿದ್ಯುತ್ ಬಿಕ್ಕಟ್ಟು ಉಂಟಾಗಿದೆ ಎಂದು ಕಾಂಗ್ರೆಸ್ ವಕ್ತಾರ ಸೌರವ್ ವಲ್ಲಭ್ ಆರೋಪಿಸಿದ್ದಾರೆ.