ರಾಜ್ಯದಲ್ಲಿ 9 ನೂತನ ವೈದ್ಯಕೀಯ ಕಾಲೇಜು ಸ್ಥಾಪನೆ- ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು: ರಾಜ್ಯದಲ್ಲಿ 9 ನೂತನ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರು ವೈದ್ಯಕೀಯ ಕಾಲೇಜಿನ ಘಟಿಕೋತ್ಸವದಲ್ಲಿ ಅದ್ವಿತೀಯ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ 65 ವೈದ್ಯಕೀಯ ಕಾಲೇಜುಗಳಿದ್ದು, ಮುಂದಿನ ದಿನಗಳಲ್ಲಿ 9 ಜಿಲ್ಲೆಗಳಲ್ಲಿ ಹೊಸದಾಗಿ 9 ಮೆಡಿಕಲ್ ಕಾಲೇಜುಗಳು ಆರಂಭ ಮಾಡಲು ತಯಾರಿ ನಡೆಯುತ್ತಿದೆ ಎಂದರು. ದೇಶದ ವೈದ್ಯ ವಿದ್ಯಾರ್ಥಿಗಳಲ್ಲಿ ಶೇ. 30.5 ರಷ್ಟು ಕೊಡುಗೆ ಕರ್ನಾಟಕದ್ದಾಗಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ನಂತರ ಕರ್ನಾಟಕದಲ್ಲಿ ಅತಿ ಹೆಚ್ಚಿನ ವೈದ್ಯ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ಪ್ರತಿ ವರ್ಷ 65 ಸಾವಿರ ಎಂಬಿಬಿಎಸ್ ವೈದ್ಯರು ಮತ್ತು 30,000 ಸ್ನಾತಕೋತ್ತರ ಪದವಿ ಪಡೆದ ವೈದ್ಯರು ಸೇವೆಗೆ ಲಭ್ಯರಾಗುತ್ತಿದ್ದಾರೆ ಎಂದು ಅವರು ಹೇಳಿದರು.
ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಇದು ದೇಶದಲ್ಲಿ ಮಹಿಳಾ ಸಬಲೀಕರಣದ ಸಂಕೇತವಾಗಿದ್ದು, ಸಮಾಜದಲ್ಲಿ ಬದಲಾವಣೆ ಆಗುತ್ತಿವೆ. ಬಡವರ ಮಕ್ಕಳು ವೈದ್ಯರಾಗ ಬೇಕೆಂಬ ಕನಸು ಈಡೇರುತ್ತಿದೆ ಎಂದರು. ಆಧುನಿಕ ಜಗತ್ತಿಗೆ ವೈದ್ಯರು ಒಗ್ಗಿಕೊಂಡು ಸಮಾಜಕ್ಕೆ ಉತ್ತಮ ಸೇವೆ ನೀಡಬೇಕು. ವೈದ್ಯರ ಕೆಲಸದಲ್ಲಿ ಧರ್ಮ, ಜಾತಿಯ ಭೇಧವಿಲ್ಲ. ಹಳ್ಳಿಹಳ್ಳಿಯಲ್ಲೂ ಆರೋಗ್ಯ ಸೇವೆ ಸುಲಭವಾಗಿ ಸಿಕ್ಕಾಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ. ವೈದ್ಯರು ತಪಾಸಣೆ ಅಥವಾ ಚಿಕಿತ್ಸೆಯ ವೇಳೆ ರೋಗಿಯ ಮತ್ತು ಅವರ ಸಂಬಂಧಿಕರ ಕಣ್ಣಿನಲ್ಲಿರುವ ಪ್ರೀತಿ ಅಥವಾ ಕಷ್ಟಗಳನ್ನು ಕಾಣುವಂತಗಬೇಕು. ಅವರ ಕಣ್ಣಿರು ಒರೆಸಿದರೆ ಅದುವೇ ನಿಮಗೆ ಆಶೀರ್ವಾದ ಎಂದು ಅಭಿಪ್ರಾಯ ಪಟ್ಟರು.
ಬಿಜಿಎಸ್ನ 150 ವೈದ್ಯ ವಿದ್ಯಾರ್ಥಿಗಳು ಇಂದಿನಿಂದ ಸಮಾಜದಲ್ಲಿ ನಿಜವಾದ ಸವಾಲನ್ನು ಎದುರಿಸಲಿದ್ದಾರೆ. ಎಲ್ಲಾ ಸಮಯದಲ್ಲೂ ಸರ್ಕಾರ ಎಲ್ಲಾ ವೈದ್ಯರ ನೆರವಿಗೆ ನಿಲ್ಲಲಿದೆ. ವೈದ್ಯರಿಗೆ ಯಾರ ಭಯವೂ ಬೇಡ. ನಿಮ್ಮ ಕೆಲಸವನ್ನು ನೀವು ಬದ್ಧತೆ ಮತ್ತು ಶ್ರದ್ಧೆಯಿಂದ ಮಾಡಿ. ಸಮಾಜಕ್ಕೆ ಮಾದರಿ ಆಗುವಂತಹ ಕೆಲಸಗಳನ್ನು ಮಾಡಿ ಎಂದು ಹೇಳಿದರು
ಶಾಲಾ ಶಿಕ್ಷಕನ ಮಗನಾಗಿರುವ ನನಗೆ ವೈದ್ಯಕೀಯ ಎಷ್ಟು ದುಬಾರಿ ಅನ್ನುವುದರ ಅರಿವಿದೆ. ಉನ್ನತ ಶಿಕ್ಷಣದಲ್ಲಿ ವಿಶ್ವದಲ್ಲೇ ವೈದ್ಯಕೀಯ ಶಿಕ್ಷಣ ಎಲ್ಲಕ್ಕಿಂತ ದುಬಾರಿ. ಭಾರತ ಮಾತ್ರವಲ್ಲ, ವಿಶ್ವದ ಎಲ್ಲಾ ಕಡೆಯೂ ವೈದ್ಯಕೀಯ ಶಿಕ್ಷಣ ದುಬಾರಿ ಆಗಿದೆ. ಆದರೆ ಪೋಷಕರು ತ್ಯಾಗ, ಬದ್ಧತೆ ಮತ್ತು ಕನಸು ಇಟ್ಟುಕೊಂಡು ಮಕ್ಕಳನ್ನು ವೈದ್ಯರನ್ನಾಗಿ ಮಾಡುತ್ತಾರೆ. ತನ್ನ ಇತಿಹಾಸ ಅರಿತವನು ಹೊಸ ಇತಿಹಾಸ ಸೃಷ್ಟಿಸಬಲ್ಲನು ಅನ್ನುವ ಮಾತಿದೆ. ಇತಿಹಾಸದ ಮೂಲಕ ಭವಿಷ್ಯವಬನ್ನು ಕಟ್ಟ ಬಹುದು ಎಂದು ಹೇಳಿದರು.
ಎಂಬಿಬಿಎಸ್ ಪದವಿ ಪಡೆದ ಈ ಬ್ಯಾಚ್ ಸ್ಪೆಷಲ್ ಬ್ಯಾಚ್ ಆಗಿದೆ. 1918-1919ರ ನಂತರ ಮೊದಲ ಬಾರಿಗೆ ಸಾಂಕ್ರಾಮಿಕ ರೋಗ ಕೊರೊನಾ ಬಾಧಿಸಿತ್ತು. ಆಗಿನ ವೈದ್ಯಕೀಯ ವಿದ್ಯಾರ್ಥಿಗಳು ಸ್ಪಾನಿಷ್ ಫ್ಲೂ ವಿರುದ್ಧ ಹೋರಾಟ ಮಾಡುವ, ಕೆಲಸ ಮಾಡುವ ಅವಕಾಶ ಪಡೆದಿದ್ದರು. ಈಗ ಈ ಬ್ಯಾಚ್ ಗೆ ಕೊರೊನಾ ವಿರುದ್ಧ ಹೋರಾಟ ಮಾಡುವ ಅವಕಾಶ ಸಿಕ್ಕಿತ್ತು. ಕಲಿಕೆಯ ಜೊತೆ ಪ್ರಾಕ್ಟೀನ್ ಅನುಭವ ಸಿಕ್ಕಿದೆ. ವೈದ್ಯ ವೃತ್ತಿಯ ಆರಂಭದಲ್ಲಿ ಸಿಕ್ಕಿದ ಈ ಅನುಭವ ನಿಮ್ಮೆಲ್ಲರನ್ನು ಅತ್ಯುತ್ತಮ ವೈದ್ಯನಾಗಿ ಮಾಡಲಿದೆ ಎಂದು ಆಶಿಸಿದರು.
ಕೊರೊನಾ ಬಳಿಕ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯಲ್ಲಿ ಬದಲಾವಣೆ ಆಗಿದೆ. 50 ವರ್ಷಗಳಲ್ಲಿ ಆಗದೇ ಇರುವುದು ಸಾಂಕ್ರಾಮಿಕ ರೋಗದ ಸಮಯದಲ್ಲಿ ಆಗಿದೆ. ,ಮೂಲ ಸೌಕರ್ಯದ ಅಭಿವೃದ್ಧಿಯಿಂದ ಹಿಡಿ ಎಲ್ಲವೂ ಈಗ ಲಭ್ಯವಿದೆ. ರಾಜ್ಯದಲ್ಲಿ 50,000 ಆಕ್ಸಿಜನ್ ಬೆಡ್ ಗಳಿವೆ. ಖಾಸಗಿಯಲ್ಲಿ 1 ಲಕ್ಷಕ್ಕೂ ಅಧಿಕ ಬೆಡ್ ಗಳಿವೆ. ಈ ಮೂಲ ಸೌಕರ್ಯಗಳ ಅಭಿವೃದ್ಧಿಯಿಂದಲೇ ಕೊರೊನಾವನ್ನು ಕಟ್ಟಿಹಾಕಲು ಸಾಧ್ಯವಾಯಿತು ಎಂದರು.
ಕೊರೊನಾ ವೇಳೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ. ಕಳೆದ 1ವರ್ಷದಲ್ಲಿ ಸರ್ಕಾರ 1750 ವೈದ್ಯರ ನೇಮಕ ಮಾಡಿದೆ. ಆದರೆ ಎಲ್ಲಾ ವೈದ್ಯರು ಹಳ್ಳಿಯಲ್ಲಿ ಕನಿಷ್ಠ 1ವರ್ಷ ಸೇವೆ ಮಾಡಬೇಕು. ಹಳ್ಳಿ ಜನರಿಗೆ ಆರೋಗ್ಯ ವ್ಯವಸ್ಥೆಯ ಅವಶ್ಯಕತೆ ಇದೆ. ಹಳ್ಳಿ ಹಳ್ಳಿಯಲ್ಲಿ ಆರೋಗ್ಯ ಸೇವೆ ಸುಲಭವಾಗಿ ಸಿಕ್ಕಾಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.