ಕುಂದಾಪುರ: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಚಿನ್ನದ ಸರ ಸುಲಿಗೆ

ಕುಂದಾಪುರ ಎ.29 (ಉಡುಪಿ ಟೈಮ್ಸ್ ವರದಿ): ವಿಳಾಸ ಕೇಳುವ ನೆಪದಲ್ಲಿ ಮಹಿಳೆಯೊಬ್ಬರು ಧರಿಸಿದ್ದ 75,000 ರೂ ಮೌಲ್ಯದ ಚಿನ್ನದ ಸರ ಸುಲಿಗೆ ಮಾಡಿರುವ ಘಟನೆ ಇಂದು ಕಾಳಾವರ ಗ್ರಾಮದ ನಡುಬೆಟ್ಟು ಎಂಬಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಪದ್ದಮ್ಮ ಶೆಡ್ತಿ ಅವರು ಇಂದು ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿತನು ರಸ್ತೆ ಬದಿ ಬೈಕ್ ನಿಲ್ಲಿಸಿಕೊಂಡಿದ್ದು, ಪದ್ದಮ್ಮ ಅವರ ಬಳಿ ‘ಇಲ್ಲಿ ರಾಮಣ್ಣನ ಮನೆ ಎಲ್ಲಿ’  ಎಂದು ಕೇಳಿದ್ದಾನೆ. ಈ ವೇಳೆ ಅವರು ‘ಇಲ್ಲಿ ಯಾರೂ ಇಲ್ಲ’ ಎಂದು ಹೇಳುತ್ತಿದ್ದಂತೆ ಅವರ ಕುತ್ತಿಗೆಯಲ್ಲಿದ್ದ 75,000 ರೂ ಮೌಲ್ಯದ 2 ಪವನ್ ತೂಕದ ಚಿನ್ನದ ರೋಪ್ ಚೈನ್‍ನ್ನು ಕಿತ್ತುಕೊಂಡು ಬೈಕ್‍ನಲ್ಲಿ ಪರಾರಿಯಾಗಿದ್ದಾನೆ. ಆರೋಪಿಯು ಬೆನ್ನಿಗೆ ಸ್ಕೂಲ್ ಬ್ಯಾಗ್ ಹಾಕಿಕೊಂಡಿದ್ದು, ತಲೆಗೆ ಹೆಲ್ಮೆಟ್ ಹಾಕಿಕೊಂಡಿದ್ದಾಗಿ ಪದ್ದಮ್ಮ ಶೆಡ್ತಿ ಅವರ ಮಗ ಅಶೋಕ ಶೆಟ್ಟಿ ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!