ಉಡುಪಿ: ರೈಫಲ್’ನಿಂದ ಆಕಸ್ಮಿಕವಾಗಿ ಗುಂಡು ಹಾರಿ ಡಿ.ಎ.ಆರ್ ಹೆಡ್ ಕಾನ್‍ಸ್ಟೇಬಲ್ ಮೃತ್ಯು

ಉಡುಪಿ ಎ.29 (ಉಡುಪಿ ಟೈಮ್ಸ್ ವರದಿ): ರೈಫಲ್ ನಿಂದ ಆಕಸ್ಮಿಕವಾಗಿ ಗುಂಡು ಹಾರಿ ಉಡುಪಿ ಡಿ.ಎ.ಆರ್ ಘಟಕದ ಹೆಡ್ ಕಾನ್‍ಸ್ಟೇಬಲ್ ರಾಜೇಶ್ ಕುಂದರ್ (44) ಅವರು ಮೃತಪಟ್ಟಿದ್ದಾರೆ.

ಆದಿ ಉಡುಪಿಯ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮೌಲ್ಯಮಾಪನದ ಭದ್ರತೆಗಾಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅವರು, ನಿನ್ನೆ ರಾತ್ರಿ 8.30 ಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದರು. ಬಳಿಕ ರಾತ್ರಿ 10 ಗಂಟೆ ವೇಳೆ ತಮ್ಮ ಪತ್ನಿಗೆ ಕರೆ ಮಾಡಿ ಮಾತನಾಡಿದ್ದು, ಬೆಳಗ್ಗೆ ಬೇಗ ಬರುವುದಾಗಿ ತಿಳಿಸಿದ್ದಾರೆ. ಈ ನಡುವೆ ಅವರು ಕರ್ತವ್ಯದಲ್ಲಿರುವಾಗ, ಅವರ ಬಳಿಯಿದ್ದ ರೈಫಲ್‍ನಿಂದ ಆಕಸ್ಮಿಕವಾಗಿ ಗುಂಡು ಹಾರಿ ಅವರ ಕುತ್ತಿಗೆ ಭಾಗಕ್ಕೆ ಸಿಡಿದು ತಲೆ ಒಡೆದು ಮೃತಪಟ್ಟಿದ್ದಾರೆ. ಉಡುಪಿ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಒಂದು ತಿಂಗಳ ಹಿಂದೆ ಗಂಗೊಳ್ಳಿ ಪೇಟೆಯಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿ ಇರುವಾಗ ಹಿರಿಯ ಮತ್ತು ಕಿರಿಯ ಎಂಬ ವಿಚಾರಕ್ಕೆ ಸಂಬಂಧಿಸಿ ಮೂವರ ನಡುವೆ ಗಲಾಟೆ ನಡೆದಿತ್ತು. ಈ ಪ್ರಕರಣ ರಾಜಿ ಪಂಚಾಯಿತಿಯಲ್ಲಿ ಮುಗಿಯುವ ಹಂತದಲ್ಲಿ ಇದ್ದರೂ ರಾಜೇಶ್ ಕುಂದರ್ ಅವರೇ ಪ್ರಕರಣ ದಾಖಲಿಸಲು ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಈ ದೂರಿಗೆ ಸಂಬಂಧಿಸಿ ಹಿರಿಯ ಅಧಿಕಾರಿಗಳು ಮೂವರೂ ಪೊಲೀಸ್ ಸಿಬ್ಬಂಧಿಗಳನ್ನು ಒಂದು ತಿಂಗಳ ಮಟ್ಟಿಗೆ ಕರ್ತವ್ಯದಿಂದ ಅಮಾನತುಗೊಳಿಸಿದ್ದರು.

ಇನ್ನು ಪ್ರಾಮಾಣಿಕ ಸಿಬ್ಬಂದಿಯಾಗಿದ್ದ ರಾಜೇಶ್ ಕುಂದರ್ ಅವರು ವೃದ್ಧಾಶ್ರಯ ನಡೆಸಬೇಕು ಎನ್ನುವ ಅಭಿಲಾಷೆ ಹೊಂದಿದ್ದರು ಇದಕ್ಕಾಗಿ ಹಿರಿಯಡ್ಕದ ಹರಿಕಂಡಿಗೆಯಲ್ಲಿ 60 ಸೆಂಟ್ಸ್ ಜಾಗವನ್ನೂ ಖರೀದಿ ಮಾಡಿದ್ದರು. ಅಲ್ಲದೇ ಉಡುಪಿ ಪೊಲೀಸ್ ಅಧೀಕ್ಷಕರ ವಸತಿ ಗೃಹದಲ್ಲಿ 15 ವರ್ಷಗಳಿಂದಲೂ ಅಧಿಕ ಸಮಯ ಕರ್ತವ್ಯ ನಿರ್ವಹಿಸಿದ್ದ ಅವರು ಓರ್ವ ಪರಿಸರ ಪ್ರೇಮಿಯೂ ಆಗಿದ್ದು, ಅನೇಕ ಮರ ಗಿಡಗಳನ್ನು ನೆಡುತ್ತಿದ್ದರು ಎಂದು ತಿಳಿದು ಬಂದಿದೆ. ಮೃತರು ಪತ್ನಿ, ಒಂದು ಗಂಡು, ಒಂದು ಹೆಣ್ಣು ಅವಳಿ ಜವಳಿ ಮಕ್ಕಳನ್ನು ಅಗಲಿದ್ದಾರೆ.

ಈ ನಡುವೆ ಘಟನೆಗೆ ಸಂಬಂಧಿಸಿ ರಾಜೇಶ್ ಕುಂದರ್ ಅವರ ಮನೆಯವರು ಪ್ರತಿಕ್ರಿಯೆ ನೀಡಿದ್ದು, ನಿನ್ನೆಯಷ್ಟೇ ರಾಜೇಶ್ ಕರ್ತವ್ಯಕ್ಕೆ ಹಾಜರಾಗಿದ್ದರು. ಆಗ ಉನ್ನತ ಅಧಿಕಾರಿಗಳಾಗಲಿ ಕೆಲವು ಸಹವರ್ತಿಗಳಾಗಲಿ ಅವರ ಬಳಿ ಸರಿಯಾಗಿ ಮಾತನಾಡಲಿಲ್ಲ ಮತ್ತು ಉಮೇಶ್ ಹಾಗೂ ಮಹಮ್ಮದ್ ಆಸ್ಪಕ್ ಅವರ ಸಹಾಯದಲ್ಲಿ ಕೆಲವರು ಮಾತನಾಡಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!