ಕೊಡಗು: ತಲಕಾವೇರಿಯಲ್ಲಿ ಭೂಕುಸಿತ, ನಾಲ್ವರು ಕಣ್ಮರೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು ಪ್ರವಾಹದೊಂದಿಗೆ ಭೂಕುಸಿತ ಆರಂಭವಾಗಿದೆ. ಬ್ರಹ್ಮಗಿರಿ ವ್ಯಾಪ್ತಿಯ ತಲಕಾವೇರಿಯಲ್ಲಿ ಭೂಕುಸಿತವಾಗಿದ್ದು, ನಾಲ್ವರು ಕಣ್ಮರೆಯಾಗಿದ್ದಾರೆ .
ಪ್ರಧಾನ ಅರ್ಚಕರೂ ಸೇರಿದಂತೆ ಅವರ ಕುಟುಂಬಸ್ಥರು ಅಲ್ಲಿ ನೆಲೆಸಿದ್ದರು. ಎರಡು ಮನೆಗಳ ಪೈಕಿ ಒಬ್ಬರು ಅರ್ಚಕರು ಹೊಸ ಮನೆ ನಿರ್ಮಿಸಿಕೊಂಡು ಕುಟುಂಬದೊಂದಿಗೆ ಭಾಗಮಂಡಲದಲ್ಲಿದ್ದರು. ಇನ್ನೊಬ್ಬ ಅರ್ಚಕರು ತಲಕಾವೇರಿಯ ಮನೆಯಲ್ಲಿಯೇ ಕುಟುಂಬದೊಂದಿಗೆ ವಾಸವಿದ್ದರು. 4 ಜನರು ಕಾಣೆಯಾಗಿರುವ ಮಾಹಿತಿ ಇದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳು ಉಕ್ಕಿ ಹರಿಯುತ್ತಿವೆ. ಮಳೆ, ಭೂಕುಸಿತ ಹಾಗೂ ಪ್ರವಾಹಕ್ಕೆ ಕೊಡಗು ತತ್ತರಿಸಿದೆ. ಕುಶಾಲನಗರದ ಸಾಯಿ ಬಡಾವಣೆ ಹಾಗೂ ಕುವೆಂಪು ಬಡಾವಣೆ ಜಲಾವೃತಗೊಂಡಿದ್ದು ಜನರನ್ನು ಸ್ಥಳಾಂತರ ಮಾಡಲಾಗಿದೆ. ಅಪಾಯಕಾರಿ ಸ್ಥಳದಲ್ಲಿ ಅರ್ಚಕ ಕುಟುಂಬ ವಾಸವಿತ್ತು. 2019ರಲ್ಲೂ ಅರ್ಚಕರು ವಾಸವಿದ್ದು ಸ್ಥಳದ ಸ್ವಲ್ಪವೇ ದೂರದಲ್ಲಿ ಭೂಕುಸಿತವಾಗಿತ್ತು.
ಕಾರ್ಯಾಚರಣೆ ಕಷ್ಟ: ತಲಕಾವೇರಿ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಬೆಟ್ಟದಲ್ಲಿ ಮಣ್ಣು ಕುಸಿಯುತ್ತಲೇ ಇದೆ. ಇದರಿಂದ ಕಾರ್ಯಾಚರಣೆ ತಂಡಕ್ಕೂ ದುರಂತದ ಸ್ಥಳಕ್ಕೆ ತಲುಪುವುದು ಕಷ್ಟವಾಗಿದೆ.
ಸತತ ಮೂರನೇ ವರ್ಷವೂ ಕೊಡಗು ಜಿಲ್ಲೆಯು ಭೀಕರ ದುರಂತಕ್ಕೆ ತುತ್ತಾಗಿದೆ. ಕಳೆದ ಎರಡು ವರ್ಷವೂ ಇದೇ ರೀತಿ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿ ಮಹಾಮಳೆ ಸಾವು ನೋವಿಗೆ ಕಾರವಾಗಿತ್ತು. ಅದೇ ರೀತಿಯ ಕಹಿ ಘಟನೆಗಳು ಮತ್ತೆ ಮರುಕಳಿಸಿವೆ.