ತಲೆಗೆ ಟೋಪಿ ಧರಿಸಿ, ಗಲಭೆ ಸೃಷ್ಟಿಗೆ ಪ್ರಯತ್ನ, 7 ಮಂದಿಯ ಬಂಧನ
ಲಖನೌ: ಮಸೀದಿಯೊಂದರ ಹೊರಗಡೆ ಮಾಂಸದ ಚೂರು ಸೇರಿದಂತೆ ಕೆಲ ಆಕ್ಷೇಪಾರ್ಹ ವಸ್ತುಗಳನ್ನು ಎಸೆಯುವುದರೊಂದಿಗೆ ಅಯೋಧ್ಯೆಯಲ್ಲಿ ಕೋಮು ಸೌಹಾರ್ದತೆಗೆ ಭಂಗ ತರಲು ಯತ್ನಿಸಿದ 11 ಮಂದಿಯ ಪೈಕಿ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಉಳಿದವರ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳು ಮುಸ್ಲಿರಂತೆ ಟೋಪಿ ಧರಿಸುವ ಮೂಲಕ ಗಲಭೆ ಸೃಷ್ಟಿಸಲು ಪ್ರಯತ್ನಿಸಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಈ ಆರೋಪಿಗಳು ಶಾಂತಿ ಮತ್ತು ಸೌಹಾರ್ದತೆ ಕೆಡಿಸಲು ಮಾಂಸದ ತುಂಡುಗಳು, ಬೈಕ್ ಗಳು, ಕೆಲವು ಆಕ್ಷೇಪಾರ್ಹ ಫೋಸ್ಟರ್ ಗಳನ್ನು ಮಸೀದಿ ಹೊರಗಡೆ ಎಸೆದಿದ್ದರು ಎಂದು ಅಯೋಧ್ಯೆ ಎಸ್ ಎಸ್ ಪಿ ಕೆಕೆ ಪಾಂಡೆ ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಆರೋಪಿಗಳನ್ನು ಪತ್ತೆ ಹಚ್ಚಲಾಗಿದ್ದು, ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಮತ್ತು ಗ್ಯಾಂಗ್ ಸ್ಟರ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡಕ್ಕೆ ಒಂದು ಲಕ್ಷ ರೂಪಾಯಿ ಬಹುಮಾನವನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವಾನಿಸ್ ಅವಸ್ತಿ ಘೋಷಿಸಿದ್ದಾರೆ. ಮಸೀದಿ ಹೊರಗಡೆ ಆಕ್ಷೇಪಾರ್ಹ ವಸ್ತು ಎಸೆದು ಕೋಮು ಸಾಮರಸ್ಯ ಹಾಳು ಮಾಡಲು ಯತ್ನಿಸಿದ್ದ ಆರೋಪದ ಮೇರೆಗೆ ಈವರೆಗೂ 7 ಮಂದಿಯನ್ನು ಬಂಧಿಸಲಾಗಿದ್ದು, ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಐಪಿ ಕೆ ಪಿ ಸಿಂಗ್ ಹಾಗೂ ಅಯೋಧ್ಯ ಎಸ್ ಎಸ್ ಪಿ ಎಸ್ ಕೆ ಪಾಂಡ್ಯ ತಿಳಿಸಿದ್ದಾರೆ.