ಉಡುಪಿ- ಮೇ.7, ಮಂಗಳೂರು- ಮೇ 8 ರಂದು ”ತೀರ್ಥ ವಿಠ್ಠಲ್” ಭಕ್ತಿ ಸಂಗೀತೋತ್ಸವ

ಉಡುಪಿ ಎ.29(ಉಡುಪಿ ಟೈಮ್ಸ್ ವರದಿ): ಸಂಗೀತ ಸಭಾ ಉಡುಪಿ ಹಾಗೂ ಆಭರಣ ಜ್ಯುವೆಲ್ಲರ್ಸ್ ಇವರ ಸಹಯೋಗದೊಂದಿಗೆ ಮೇ.7 ರಂದು ಸಂಜೆ 5:45ಕ್ಕೆ ಉಡುಪಿಯ ಬಾಸೆಲ್ ಮಿಷನ್ ಸಭಾಂಗಣದಲ್ಲಿ ಹಾಗೂ ಮೇ 8 ರಂದು ಸಂಜೆ 5:00ಕ್ಕೆ ಮಂಗಳೂರಿನ ಪುರಭವನದಲ್ಲಿ ತೀರ್ಥ ವಿಠ್ಠಲ್ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು  ಸಂಗೀತ ಸಭಾಧ್ಯಕ್ಷ ಟಿ ರಂಗ ಪೈ ತಿಳಿಸಿದ್ದಾರೆ.

ಈ ಬಗ್ಗೆ ಉಡುಪಿಯ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರಿಗೆ ಪಾಸ್ ಮುಖೇನ ಉಚಿತ ಪ್ರವೇಶ ಇದ್ದು, ಪಾಸ್ ಗಳು ಮೇ 1ರ ರಂದು ಉಡುಪಿಯ ಕಾರ್ಯಕ್ರಮಕ್ಕೆ ಕವಿ ಮುದ್ದಣ ಮಾರ್ಗದಲ್ಲಿರುವ “ಹರ್ಷ” ಮಳಿಗೆಯಲ್ಲಿ ಹಾಗೂ ಮಂಗಳೂರಿನ ಕಾರ್ಯಕ್ರಮಕ್ಕೆ ಕೆ.ಎಸ್. ರಾವ್ ರಸ್ತೆಯಲ್ಲಿರುವ “ಹರ್ಷ” ಮಳಿಗೆಯಲ್ಲಿ ಲಭ್ಯವಿರುತ್ತದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕಾರ್ಯಕ್ರಮದಂದು 30 ನಿಮಿಷಗಳಿಗೂ ಮುನ್ನ ತಮ್ಮ ಅಸನಗಳಲ್ಲಿ ಅಸೀನರಾಗಿರಬೇಕು ಹಾಗೂ ಕಾರ್ಯಕ್ರಮದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕಾಗಿ ತಿಳಿಸಿದ್ದಾರೆ. ಹಾಗೂ ವಿಜಯನಾಥ್ ಶಣೈ ಇವರಿಂದ ಪ್ರಾರಂಭಿಸಲ್ಪಟ್ಟ ಸಂಗೀತ ಸಭಾ ಕಳೆದ ಹಲವಾರು ಸಂವತ್ಸರಗಳಲ್ಲಿ ಹತ್ತು ಹಲವು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು ಜನಮನ್ನಣೆಗೆ ಪಾತ್ರವಾಗಿದೆ.

ಕಳೆದ ಐದು ವರ್ಷಗಳಿಂದ ಅಯೋಜಿತಗೊಂಡು ಕಲಾಭಿಮಾನಿಗಳ ಮನಸೂರೆಗೊಂಡ ತೀರ್ಥ ವಿಠಲ್ 2022 ಸಂಗೀತ ಸಂಭ್ರಮದಲ್ಲಿ ಈ ಬಾರಿ ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಪಂಡಿತ್ ಮಹೇಶ್ ಕಾಳೆಯವರು ತಮ್ಮ ಸಹಕಲಾವಿದರಾದ ಪ್ರಹ್ಲಾದ ಪ್ರಕಾಶ್ ಜಾಧವ್ (ಸಹಗಾಯಕ),ರಾಜೀವ್ ತಾಂಬೆ (ಹಾರ್ಮೋನಿಯಂ), ಪಾಂಡುರಂಗ ಪವಾರ್ (ತಬಲ) ಓಂಕಾರ್ ದಾಲ್ವಿ (ಪಖವಾಜ್), ಅಮಿತ್ ಪಾಧ್ಯೆ (ಆರ್ಗನ್), ಕೇದಾರ್ ಗುಲ್ವಾನಿ (ವಯಲಿನ್), ಸೂರ್ಯಕಾಂತ್ ಸುರ್ವೆ (ತಾಳ) ಇವರೊಂದಿಗೆ ಭಜನ ಸಂಧ್ಯಾ ಮತ್ತು ನಾಟ್ಯ ಸಂಗೀತ ಪ್ರಸ್ತುತಪಡಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿಗಳಾದ ಸಂಧ್ಯಾ ಕಾಮತ್, ವಿನೋದ್ ಕಾಮತ್, ಅಜಿತ್ ಪೈ, ಸಿಎ ಅನಂತ ನಾರಾಯಣ ಪೈ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!