| ಉಡುಪಿ ಎ.29(ಉಡುಪಿ ಟೈಮ್ಸ್ ವರದಿ): ಮೈಸೂರಿನ ಆವಿಷ್ಕಾರ್ ಜೀವನ್ ವಿವಿದ್ದೋದ್ದೇಶ ಸಹಕಾರ ಸಂಘದ ಉಡುಪಿ ಶಾಖೆಯಲ್ಲಿ ನಡೆದ 1.25 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸಂಘದ ಅಧ್ಯಕ್ಷ ಹಾಗೂ ನಿರ್ದೇಶಕನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಸಂಘದ ಅಧ್ಯಕ್ಷ ಲೋಕೇಶ್ ಮತ್ತು ನಿರ್ದೇಶಕ ದಿಲೀಪ್ ಸುಪ್ಪೆಕಾರ್ ಬಂಧಿತರು. ಈ ಇಬ್ಬರು ಆರೋಪಿಗಳು ಮೈಸೂರಿನ ಆವಿಷ್ಕಾರ್ ಜೀವನ್ ವಿವಿದ್ದೋದ್ದೇಶ ಸಹಕಾರ ಸಂಘದ ಶಾಖೆಯನ್ನು ಉಡುಪಿಯಲ್ಲಿ ತೆರೆದಿದ್ದು, ಸಂಘದಲ್ಲಿ ಶೇರು ಬಂಡವಾಳ ಮತ್ತು ಠೇವಣಿದಾರರಿಂದ ನಿರಖು ಮತ್ತು ಆರ್.ಡಿ ಮೂಲಕ 3 ಕೋಟಿಗೂ ಅಧಿಕ ಠೇವಣಿ ಸಂಗ್ರಹಿಸಿದ್ದರು. ಬಳಿಕ ಅವ್ಯವಹಾರದ ಬಗ್ಗೆ ಮಾಹಿತಿ ತಿಳಿದ ಠೇವಣಿದಾರರು ಹಣವನ್ನು ಹಿಂಪಡೆದಿದ್ದರು. ಆದರೂ ಕೆಲವೊಂದು ಕಾರಣ ನೀಡಿ ಶೇರು ಬಂಡವಾಳ ಮತ್ತು ನಿರಕು ಠೇವಣಿಗಳನ್ನು ಗ್ರಾಹಕರಿಗೆ ನೀಡದೆ ವಂಚಿಸಿದ್ದರು. ಬಳಿಕ ಉಡುಪಿ ಶಾಖೆಯನ್ನು ಮುಚ್ಚಿದ್ದರು ಎನ್ನಲಾಗಿದೆ.
ಈ ವಂಚನೆ ಬಗ್ಗೆ ಹೂಡಿಕೆದಾರರಾದ ಬ್ರಹ್ಮಾವರದ ಅನಂತ ನಾಯ್ಕ್ ಮತ್ತು ಇತರರು ಉಡುಪಿ ನಗರ ಠಾಣೆಯಲ್ಲಿ ಸಂಘದ ಅಧ್ಯಕ್ಷ ಲೋಕೇಶ್ ಸಹಿತ 17 ಮಂದಿ ನಿರ್ದೇಶಕರ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಡುಪಿ ಪೊಲೀಸರು ಇದೀಗ ಆರೋಪಿಗಳಾದ ಸಂಘದ ಅಧ್ಯಕ್ಷ ಹಾಗೂ ನಿರ್ದೇಶಕನನ್ನು ಮೈಸೂರಿನಲ್ಲಿ ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
| |