ಮಣಿಪಾಲ: ಬಾಡಿಗೆ ನೆಪದಲ್ಲಿ ಕಾರು ಚಾಲಕನ ಅಪಹರಿಸಿ ದರೋಡೆ
ಮಣಿಪಾಲ ಎ.28 (ಉಡುಪಿ ಟೈಮ್ಸ್ ವರದಿ): ಪ್ರಯಾಣಿಕರ ಸೋಗಿನಲ್ಲಿ ಬಂದ ನಾಲ್ವರು ಅಪರಿಚಿತರು ಚೂರಿ ತೋರಿಸಿ ಬೆದರಿಸಿ ದರೋಡೆ ಗೈದಿರುವುದಾಗಿ ಮಣಿಪಾಲದ ಬಾಡಿಗೆ ಕಾರು ಚಾಲಕ ಶ್ರೀಧರ ಭಕ್ತ ಎಂಬವರು ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಬಗ್ಗೆ 80 ಬಡಗುಬೆಟ್ಟು ಗ್ರಾಮದ ಕಾರು ಚಾಲಕ ಶ್ರೀಧರ ಭಕ್ತ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ, ಶ್ರೀಧರ ಭಕ್ತ ಅವರು ಮಣಿಪಾಲದಲ್ಲಿ ಕಾರು ಬಾಡಿಗೆ ಇಟ್ಟುಕೊಂಡಿದ್ದು ಎಂದಿನಂತೆ ಎ.27 ರಂದು ತಮ್ಮ ಕೆಲಸಕ್ಕಾಗಿ ಮಣಿಪಾಲಕ್ಕೆ ಬಂದು ಟೈಗರ್ ಸರ್ಕಲ್ ಬಳಿ ಲೈನ್ ನಲ್ಲಿ ತಮ್ಮ ಕಾರು ನಿಲ್ಲಿದ್ದರು. ಸಂಜೆ 4.25 ರ ಸುಮಾರು 35 ರಿಂದ 45 ವರ್ಷ ಪ್ರಾಯದ 4 ಜನ ತುಳು ಮಾತನಾಡುತ್ತಿದ್ದ ಅಪರಿಚಿತ ವ್ಯಕ್ತಿಗಳು ಇವರ ಕಾರಿನ ಬಳಿ ಬಂದು ನಮಗೆ ಕಾರವಾರಕ್ಕೆ ಹೋಗಲು ಇದೆ ಎಷ್ಟು ಬಾಡಿಗೆ ಎಂದು ವಿಚಾರಿಸಿದ್ದಾರೆ. ಈ ವೇಳೆ ಕಾರಿನ ಬಾಡಿಗೆ 5,800 ರೂ. ಎಂದು ಹೇಳಿದ್ದು, ಬಳಿಕ ಶ್ರೀಧರ ಅವರು ನಾಲ್ವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು.
ಈ ನಡುವೆ ನಾಲ್ವರು ಆರೋಪಿಗಳು ರಾತ್ರಿ 8.40 ರ ಸುಮಾರಿಗೆ ಅಂಕೋಲ ರೈಲ್ವೇ ಸ್ಟೇಷನ್ ಸಮೀಪ ಕಾರನ್ನು ನಿಲ್ಲಿಸಲು ಹೇಳಿದ್ದರು. ಅದರಂತೆ ಶ್ರೀಧರ ಭಕ್ತ ಅವರು ಕಾರು ಸಿಲ್ಲಿಸಿದ್ದು, ಈ ವೇಳೆ ಕಾರಿನ ಹಿಂಬದಿಯಲ್ಲಿದ್ದ ಒಬ್ಬ ವ್ಯಕ್ತಿಯು ಶ್ರೀಧರ ಅವರ ಕುತ್ತಿಗೆಯನ್ನು ಒತ್ತಿ ಹಿಡಿದು, ಚೂರಿಯನ್ನು ಚುಚ್ಚುವಂತೆ ಹಿಡಿದು ಬೆದರಿಸಿ ಅವರ ಬಳಿ ಇದ್ದ ಹಣವನ್ನು ನೀಡುವಂತೆ ಹೆದರಿಸಿದ್ದಾರೆ. ಹಾಗೂ ಶ್ರೀಧರ ಅವರ ಬಳಿ ಇದ್ದ 3,000 ರೂ. ನಗದು ಹಾಗೂ ಕೈಯಲ್ಲಿದ್ದ ವಾಚ್ ನ್ನು ದೋಚಿದ್ದಾರೆ.
ಮಾತ್ರವಲ್ಲದೆ ಕಳ್ಳರ ಪೈಕಿ ಓರ್ವ ಕಾರನ್ನು ಚಲಾಯಿಸಿಕೊಂಡು ಹೋಗಿದ್ದು ರಾತ್ರಿ 11.30 ರ ಸುಮಾರಿಗೆ ಕುಂದಾಪುರದ ಆನೆಗುಡ್ಡೆಗೆ ಬಂದು ಎ.ಟಿ.ಎಂ ಬಳಿ ಕಾರನ್ನು ನಿಲ್ಲಿಸಿ ಎ.ಟಿ.ಎಂನಿಂದ ದುಡ್ಡು ತೆಗೆದು ತರುವಂತೆ ಹೇಳಿ ಬೆದರಿಕೆ ಹಾಕಿದ್ದಾರೆ. ಈ ವೇಳೆ ಶ್ರೀಧರ ಅವರು ಎಟಿಎಂ ಗೆ ಹೋಗಿ ಹೊರಗೆ ಬಂದು ತಪ್ಪಿಸಿಕೊಂಡು ಬಂದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.