5 ರಾಜ್ಯಗಳಲ್ಲಿ ಉಷ್ಣ ಅಲೆ- ಆರೆಂಜ್ ಅಲರ್ಟ್ ಘೋಷಣೆ!
ನವದೆಹಲಿ: ದೇಶದ ಅನೇಕ ರಾಜ್ಯಗಳಲ್ಲಿ ಉಷ್ಣಾಂಶ ತೀವ್ರವಾಗಿ ಏರಿಕೆಯಾಗುತ್ತಿದ್ದು, ದೇಶದ ಹೆಚ್ಚಿನ ಭಾಗಗಳು ಸುಮಾರು 45 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ವರದಿ ಮಾಡಿವೆ. ಹೀಗಾಗಿ ಹವಾಮಾನ ಇಲಾಖೆಯು ಉತ್ತರ ಭಾರತದ ಕನಿಷ್ಠ ಐದು ರಾಜ್ಯಗಳಿಗೆ ಉಷ್ಣ ಅಲೆಯ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಭಾರತೀಯ ಹವಾಮಾನ ಇಲಾಖೆ ಕನಿಷ್ಠ ಮುಂದಿನ ಮೂರು ದಿನಗಳಲ್ಲಿ ಉತ್ತರ ಭಾರತದ ಐದು ರಾಜ್ಯಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಸುಮಾರು 2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಬಹುದು ಎಂದು ಎಚ್ಚರಿಕೆ ನೀಡಿದೆ.
ರಾಜಸ್ಥಾನ, ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ಒಡಿಶಾದಲ್ಲಿ ಉಷ್ಣ ಅಲೆಯ ಎಚ್ಚರಿಕೆಯನ್ನು ಘೋಷಿಸಲಾಗಿದೆ. ಏಕೆಂದರೆ ಈ ರಾಜ್ಯಗಳ ಕೆಲವು ಭಾಗಗಳು 45 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವನ್ನು ದಾಖಲಿಸುತ್ತವೆ. ತೀವ್ರ ಪರಿಸ್ಥಿತಿಯು ಮೇ ಮೊದಲ ವಾರದವರೆಗೆ ಮುಂದುವರಿಯುವ ಸಾಧ್ಯತೆಯಿದೆ, ನಂತರ ಮಳೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಐಎಂಡಿ ವಿಜ್ಞಾನಿ ಆರ್‌ಕೆ ಜೆನಮಣಿ ಅವರು ತಿಳಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ತಾಪಮಾನವು 44 ಡಿಗ್ರಿ ಸೆಲ್ಸಿಯಸ್‌ಗೆ ತಲುಪಲಿದೆ ಎಂದು ಹವಾಮಾನ ಇಲಾಖೆ ಕಚೇರಿ ಮುನ್ಸೂಚನೆ ನೀಡಿದೆ.
ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ವಿದ್ಯುತ್ ಬೇಡಿಕೆಯಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ. ರಾಜಸ್ಥಾನವು ಕಾರ್ಖಾನೆಗಳಿಗೆ ನಾಲ್ಕು ಗಂಟೆಗಳ ಕಾಲ ವಿದ್ಯುತ್ ಕಡಿತವನ್ನು ನಿಗದಿಪಡಿಸಲಾಗಿದೆ. ತೀವ್ರ ಉಷ್ಣಾಂಶದ ಕಾರಣ ಪಶ್ಚಿಮ ಬಂಗಾಳವು ಶಿಕ್ಷಣ ಸಂಸ್ಥೆಗಳಿಗೆ ಬೇಸಿಗೆಯ ಆರಂಭದಲ್ಲಿ ರಜೆಯನ್ನು ಘೋಷಿಸಿದೆ. ವರದಿಗಳ ಪ್ರಕಾರ ರಾಜ್ಯದ ಶಾಲಾ-ಕಾಲೇಜುಗಳನ್ನು ಮೇ 2 ರೊಳಗೆ ಬಂದ್ ಮಾಡುವಂತೆ ಆದೇಶಿಸಲಾಗಿದೆ.
ಒಡಿಶಾದಲ್ಲೂ ಸೂರ್ಯ ನೆತ್ತಿ ಸುಡುತ್ತಿದ್ದು, ಮಹಿಳೆಯರು ಕಾರ್ ನ ಬಾನೆಟ್ ಮೇಲೇ ಚಪಾತಿ ಮಾಡುತ್ತಿದ್ದಾರೆ. ಈ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.