ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಕಿನ್ನಿಮೂಲ್ಕಿ ಕೃಷ್ಣಮೂರ್ತಿ ಆಚಾರ್ಯ ಸ್ಪರ್ಧೆಗೆ ನಿರ್ಧಾರ
ಉಡುಪಿ: (ಉಡುಪಿ ಟೈಮ್ಸ್ ವರದಿ) ಕಾಂಗ್ರೆಸ್ ನಾಯಕ, ಸಮಾಜ ಸೇವಕ ಕಿನ್ನಿಮೂಲ್ಕಿ ಕೃಷ್ಣಮೂರ್ತಿ ಆಚಾರ್ಯ ಈ ಬಾರಿ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಉಡುಪಿಯಲ್ಲಿ ಸಾಮಾಜಿಕ ಸೇವೆ, ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಇವರು ಸುಮಾರು ಎರಡು ದಶಕಗಳ ಕಾಲ ಕ್ರೀಡೆ, ಸಾಂಸ್ಕೃತಿಕ, ಬಡಜನರ ಆರೋಗ್ಯ ಸೇವೆಗಳಿಗೆ ಸ್ಪಂದನೆ ಸಹಿತ ಎಲ್ಲಾ ರಂಗದಲ್ಲೂ ತನ್ನನ್ನು ತಾನೂ ತೊಡಗಿಸಿಕೊಂಡಿದ್ದರು.
ಸದ್ಯ ತಾನೂ ಸಮಾಜ ಸೇವೆಯ ಮೂಲಕ ತನ್ನೂರಿನ ಜನತೆಯ ಸಮಸ್ಯೆಗಳನ್ನು ಅರಿತಿದ್ದು ಈ ಬಾರಿ ಉಡುಪಿ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತ ತನ್ನ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಕೃಷ್ಣಮೂರ್ತಿ ಆಚಾರ್ಯ ಪಕ್ಷವನ್ನು ಉಡುಪಿಯಲ್ಲಿ ಕಟ್ಟಿ ಬೆಳೆಸುವಲ್ಲಿ ತಮ್ಮ ಸೇವೆಯನ್ನೂ ನೀಡಿದ್ದರು.
ಹುಟ್ಟು ಹೋರಾಟಗಾರರಾಗಿದ್ದ ಮೂರ್ತಿಯವರು ಎಲ್ಲಾ ಧರ್ಮಗಳ ಜೊತೆ ಅನ್ಯೋನ್ಯವಾಗಿದ್ದು, ಇಂದಿಗೂ ಧಾರ್ಮಿಕ ಸೇವೆಯನ್ನು ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ. 2008ರಲ್ಲಿ ನಗರ ಸಭೆಯ ಚುನಾವಣೆ ಸಮಯ ವಿರೋಧ ಪಕ್ಷದ ಕಾರ್ಯಕರ್ತರು ಮನೆಗೆ ನುಗ್ಗಿ ಹಲ್ಲೆ ಮಾಡಿದ್ದೂ ಮಾತ್ರವಲ್ಲದೆ, ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಇವರನ್ನು ಅಂದಿನ ಆಡಳಿತ ಪಕ್ಷವು ಇವರನ್ನು ಮಣಿಸಲು ಜೈಲಿಗೂ ತಳ್ಳಿತ್ತು.
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಉಡುಪಿ ಕ್ಷೇತ್ರದಲ್ಲಿ ಟಿಕೆಟ್ ನೀಡಿದರೆ ಸ್ಪರ್ಧಿಸುವ ಬಗ್ಗೆ ಜಿಲ್ಲೆಯ ಹಿರಿಯ ನಾಯಕರಲ್ಲಿ ಹೇಳಿಕೊಂಡಿರುವ ಬಗ್ಗೆ ಮಾಹಿತಿ ಇದ್ದು, ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎನ್ನುವುದು ಕಾದು ನೋಡಬೇಕಾಗಿದೆ.
ಈ ಬಗ್ಗೆ “ಉಡುಪಿ ಟೈಮ್ಸ್” ಕೃಷ್ಣಮೂರ್ತಿ ಆಚಾರ್ಯರನ್ನು ಸಂಪರ್ಕಿಸಿದಾಗ, ನಾನು ಹಲವಾರು ವರ್ಷಗಳ ಕಾಲ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಅದನ್ನು ಗುರುತಿಸಿ ನಮ್ಮ ಪಕ್ಷ ಟಿಕೆಟ್ ನೀಡುತ್ತೆ ಎಂಬ ನಂಬಿಕೆ ಇದೆ. ಚುನಾವಣೆಗೆ ಇನ್ನೂ ಸಮಯವಿದ್ದು ನಾನು ನನ್ನ ಸಾಮಾಜಿಕ ಸೇವೆಯನ್ನು ಮುಂದುವರಿಸಿಕೊಂಡು ಹೋಗುವುದರ ಜೊತೆ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿರುವುದಾಗಿ ತಿಳಿಸಿದರು.