ಉಡುಪಿ: ಖಾಲಿ ಹಾಳೆಯಲ್ಲಿ ಸಹಿ ಪಡೆದು ವಂಚಿಸಿದ ಬ್ಯಾಂಕ್ ಮ್ಯಾನೇಜರ್ ಸಹಿತ ನಾಲ್ವರ ವಿರುದ್ಧ ದೂರು

ಉಡುಪಿ ಎ.28 (ಉಡುಪಿ ಟೈಮ್ಸ್ ವರದಿ): ಖಾಲಿ ಹಾಳೆಯಲ್ಲಿ ಸಹಿ ಪಡೆದು ವಾಪಾಸ್ಸು ನೀಡದೇ ವಂಚಿಸಿರುವ ಬಗ್ಗೆ ನೋರ್ಬಟ್ ಎಸ್ ಮಸ್ಕರೇನಸ್ ಅವರು ಎಚ್.ಡಿ.ಎಫ್.ಸಿ ಬ್ಯಾಂಕಿನ ಸಿಬ್ಬಂದಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೆರಂಪಳ್ಳಿ ನೋರ್ಬಟ್ ಎಸ್ ಮಸ್ಕರೇನಸ್ ಅವರು 2020ರ ಮೇ. 27 ರಂದು ಉಡುಪಿಯ ಡಯಾನ ಸರ್ಕಲ್ ಬಳಿ ಇರುವ ಹೆಚ್‍ಡಿಎಫ್‍ಸಿ ಬ್ಯಾಂಕಿಗೆ ಡಿಮ್ಯಾಟ್ ಖಾತೆಯನ್ನು ತೆರೆಯಲು ಹೋಗಿದ್ದರು. ಈ ವೇಳೆ ನೋರ್ಬಟ್ ಎಸ್ ಮಸ್ಕರೇನಸ್ ಅವರಿಂದ ಬ್ಯಾಂಕಿನ ರಂಜಿತ್ ಶೆಟ್ಟಿ ಎಂಬುವವರು ಅರ್ಜಿಯನ್ನು ತುಂಬಿಸುವ ಸಮಯ 40-50 ಸಹಿಗಳನ್ನು ಪಡೆದಿದ್ದು, ಅದರಲ್ಲಿ ಖಾಲಿ ಹಾಳೆಗಳು ಕೂಡಾ ಇರುತ್ತದೆ. ಬಳಿಕ ಸಂಶಯಗೊಂಡ ಅವರು ಬ್ಯಾಂಕಿಗೆ ಹೋಗಿ ಸಹಿ ಹಾಕಿದ ದಾಖಲಾತಿಗಳನ್ನು ವಾಪಾಸು ನೀಡಲು ಹೇಳಿದಾಗ ಬ್ಯಾಂಕಿನವರು ಅದನ್ನು ಚೆನೈ ಮತ್ತು ಮುಂಬಯಿಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ. ಮಾತ್ರವಲ್ಲದೆ ಆ ನಂತರ ಸಹಿ ಮಾಡಿದ ದಾಖಲಾತಿಗಳನ್ನು ನಾಶ ಮಾಡಿರುವುದಾಗಿ ಪತ್ರವನ್ನು ಕಳುಹಿಸಿದ್ದಾರೆ ಎಂದು ದೂರಲಾಗಿದೆ.

ಅದರಂತೆ ಆರೋಪಿಗಳಾದ ಹೆಚ್.ರಂಜಿತ್ ಶೆಟ್ಟಿ, ಉಡುಪಿ ಹೆಚ್‍ಡಿಎಫ್‍ಸಿ ಬ್ಯಾಂಕ್ ಮ್ಯಾನೇಜರ್ ಪೌಲ್‍ಫ್ರಾನ್ಸಿಸ್, ಮಂಗಳೂರು ಹೆಚ್‍ಡಿಎಫ್‍ಸಿ ಬ್ಯಾಂಕ್ ಮ್ಯಾನೇಜರ್ ಸಂತೋಷ್‍ಎಸ್., ಹಾಗೂ ಬ್ಯಾಂಕಿನ ವೀಕ್ಷಿತಾ ಇವರು ನೋರ್ಬಟ್ ಎಸ್ ಮಸ್ಕರೇನಸ್ ಅವರ ಸಹಿಯನ್ನು ನಕಲು ಮಾಡಿದ್ದು, ಅಲ್ಲದೇ ಸಹಿ ಮಾಡಿರುವ ಕಾಗದ ಪತ್ರಗಳನ್ನು ವಾಪಾಸು ನೀಡದೆ ವಂಚಿಸಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!