ಪ್ರವಾಸೋದ್ಯಮ ಇಲಾಖೆಯಲ್ಲೂ ಶೇ.40 ಕಮಿಷನ್-ಕೆಆರ್‌ಎಸ್ ಆರೋಪ
ಬೆಂಗಳೂರು: ‘ಶೇ 40 ಕಮಿಷನ್ ಪಿಡುಗು ಪ್ರವಾಸೋದ್ಯಮ ಇಲಾಖೆಗೂ ಹಬ್ಬಿದೆ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ (ಜೆಎಲ್‌ಆರ್) ಸಂಸ್ಥೆಯು ಕಾಳಿ ನದಿಯಲ್ಲಿ ಜಲಕ್ರೀಡೆ (ವೈಟ್ ವಾಟರ್ ರ್‍ಯಾಫ್ಟಿಂಗ್) ನಡೆಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ತಿಂಗಳು ಕಳೆದಿದೆ. ಟೆಂಡರ್‌ನಲ್ಲಿ ಕ್ರಮಬದ್ಧವಾಗಿ ಆಯ್ಕೆಯಾದ ಸಂಸ್ಥೆ ಜೊತೆ ಕರಾರು ಒಪ್ಪಂದ ಮಾಡಿಕೊಳ್ಳಲು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ತಡೆ ಒಡ್ಡಿದ್ದಾರೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಆರೋಪಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎನ್. ಅವರು ಈ ಸಂಬಂಧ ಬುಧವಾರ ದೂರು ನೀಡಿದ್ದು, ‘ಟೆಂಡರ್‌ನಲ್ಲಿ ಆಯ್ಕೆಯಾದ ಸಂಸ್ಥೆ ಜೊತೆ ಗುತ್ತಿಗೆ ಕರಾರು ಮಾಡಿಕೊಳ್ಳದೇ ಸರ್ಕಾರಕ್ಕೆ ನಷ್ಟವಾಗುವಂತೆ ಮಾಡಿರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.
ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಸಂಸ್ಥೆಯು ಜಲಕ್ರೀಡೆ ನಡೆಸುವುದಕ್ಕೆ ಅರ್ಹ ಸಂಸ್ಥೆಯನ್ನು ಆಯ್ಕೆ ಮಾಡಲು 2022ರ ಜ.25ರಂದು ಟೆಂಡರ್ ಆಹ್ವಾನಿಸಿತ್ತು. ಬಿಡ್ ಸಲ್ಲಿಸಲು ಫೆ.15 ಕೊನೆಯ ದಿನವಾಗಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ಎರಡು ಸಂಸ್ಥೆಗಳು ಭಾಗವಹಿಸಿದ್ದವು. ಉತ್ತರಾಖಂಡದ ಹೃಷಿಕೇಶ ಮೂಲದ ಆಲ್ಗೊಟ್ರಿಪ್ ಹಾಸ್ಟಿಟಾಲಿಟಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಟೆಂಡರ್‌ನಲ್ಲಿ ಅರ್ಹತೆ ಪಡೆದಿತ್ತು. ಈ ವಿಚಾರವನ್ನು ಜೆಎಲ್‌ಆರ್‌ನ ವ್ಯವಸ್ಥಾಪಕ ನಿರ್ದೇಶಕರು ಆ ಸಂಸ್ಥೆಗೆ ಮಾರ್ಚ್ 25ರಂದು ಅಧಿಕೃತವಾಗಿ ತಿಳಿಸಿದ್ದರು. ವಿವರವಾದ ಷರತ್ತುಗಳು ಮತ್ತು ನಿಯಮಾವಳಿಗಳನ್ನು ಒಳಗೊಂಡ ಒಪ್ಪಂದದ ಕರಡನ್ನು ಪತ್ರದೊಂದಿಗೆ ಲಗತ್ತಿಸಿ, ₹ 200ರ ಛಾಪಾ ಕಾಗದದಲ್ಲಿ ಒಪ್ಪಂದ ಮಾಡಿಕೊಳ್ಳಬೇಕು ಎಂದೂ ಸೂಚಿಸಿದ್ದರು.
‘ಒಪ್ಪಂದ ಪತ್ರಕ್ಕೆ ಆಲ್ಗೊಟ್ರಿಪ್ ಹಾಸ್ಟಿಟಾಲಿಟಿ ಸಂಸ್ಥೆಯು ಸಹಿ ಮಾಡಿ ನೀಡಿದೆ. ಸಚಿವ ಆನಂದ್ ಸಿಂಗ್ ಇದನ್ನು ತಡೆಹಿಡಿಯಲು ಸೂಚಿಸಿದ ಕಾರಣಕ್ಕೆ ಜೆಎಲ್‌ಆರ್ ಇದುವರೆಗೂ ಸಹಿ ಮಾಡದೆ ಬಾಕಿ ಉಳಿಸಿಕೊಂಡಿದೆ. ಒಪ್ಪಂದವನ್ನು ಯಾವ ಕಾರಣಕ್ಕಾಗಿ ಇಲ್ಲಿಯವರೆಗೆ ತಡೆಹಿಡಿಯಲಾಗಿದೆ ಎಂದು ಸ್ಪಷ್ಟವಾಗಿ ತಿಳಿಸಬೇಕಾಗಿತ್ತು. ಕಾರಣ ನೀಡದೆಯೇ ಅದನ್ನು ತಿಂಗಳಿಗೂ ಹೆಚ್ಚು ಕಾಲ ತಡೆಹಿಡಿದಿರುವುದಕ್ಕೆ ಭ್ರಷ್ಟಾಚಾರವಲ್ಲದೆ ಮತ್ತೇನೂ ಕಾರಣವಿರುವುದಿಲ್ಲ’ ಎಂದು ದೂರಿನಲ್ಲಿ ತಿಳಿಸಿದೆ.
‘ಆಲ್ಗೊಟ್ರಿಪ್ ಹಾಸ್ಪಿಟಾಲಿಟಿ ಸಂಸ್ಥೆಯು ಟಿಕೆಟ್ ದರದ ಮೊತ್ತದಲ್ಲಿ ಶೇ 64 ಮೊತ್ತವನ್ನು ಜೆಎಲ್‌ಆರ್‌ಗೆ ನೀಡಲು ಒಪ್ಪಿದೆ. ಇನ್ನೊಂದು ಸಂಸ್ಥೆ ಶೇಕಡ 50 ಕ್ಕಿಂತ ಕಡಿಮೆ ಮೊತ್ತ ನೀಡುವುದಾಗಿ ನಮೂದಿಸಿತ್ತು. ಆದರೂ ಟೆಂಡರ್‌ನಲ್ಲಿ ಆಯ್ಕೆಯಾದ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳದೆ, ಈ ಹಿಂದೆ ಕಡಿಮೆ ಮೊತ್ತವನ್ನು ಜೆಎಲ್‌ಆರ್ ಜೊತೆಗೆ ಹಂಚಿಕೊಳ್ಳುತ್ತಿದ್ದ ಸಂಸ್ಥೆಗೆ ಮುಂದುವರೆಯಲು ಅವಕಾಶ ಮಾಡಿಕೊಡಲಾಗಿದೆ’ ಎಂದು ಕೆಆರ್‌ಎಸ್ ಪಕ್ಷ ದೂರಿದೆ.