ಕೊರೋನಾ 4ನೇ ಅಲೆ ಆತಂಕ: ‘3ಟಿ’ ಸೂತ್ರ ಪಾಲನೆಗೆ ಪ್ರಧಾನಿ ಮೋದಿ ಸೂಚನೆ
ನವದೆಹಲಿ: ಭಾರತದಲ್ಲಿ ದಿನ ಕಳೆಯುತ್ತಿದ್ದಂತೆ ಕೊರೋನಾ ಸೋಂಕು ಏರಿಕೆಯಾಗುತ್ತಿದ್ದು, 4ನೇ ಅಲೆಯ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, 3ಟಿ’ ಸೂತ್ರ ಪಾಲನೆ ಮಾಡುವಂತೆ ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಭಗವಂತ್ ಮನ್, ಪ್ರಧಾನಿ ಮೋದಿ, ಪ್ರಧಾನ ಮಂತ್ರಿ ಕಚೇರಿಯ ಹಿರಿಯ ಅಧಿಕಾರಿಗಳ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಆಯಾ ಸಚಿವಾಲಯಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇತರ ದೇಶಗಳಿಗೆ ಹೋಲಿಸಿದರೆ ಕೋವಿಡ್ ಸಾಂಕ್ರಾಮಿಕ ರೋಗವನ್ನು ಭಾರತ ಉತ್ತಮವಾಗಿ ನಿರ್ವಹಿಸುತ್ತಿದೆ. ಆದರೂ ಅನೇಕ ರಾಜ್ಯಗಳಲ್ಲಿ ಸೋಂಕು ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಎಚ್ಚರದಿಂದ ಇರಬೇಕು. ಕೋವಿಡ್ ಸವಾಲನ್ನು ಇನ್ನೂ ಸಂಪೂರ್ಣವಾಗಿ ಎದುರಿಸಲು ಸಾಧ್ಯವಾಗಿಲ್ಲ. ಮುಂಬರುವ ಸವಾಲುಗಳನ್ನು ನಾವೆಲ್ಲರೂ ಒಟ್ಟಾಗಿ ಎದುರಿಸಬೇಕಾಗಿದೆ. ಅದಕ್ಕೆ ಸಿದ್ಧರಾಗಿರಬೇಕಿದೆ. ಜನರಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿ ಎಂದು ಕರೆ ನೀಡಿದ್ದಾರೆ.
ದೇಶದ ಶೇ 96 ರಷ್ಟು ವಯಸ್ಕರರು ಕೋವಿಡ್ನಿಂದ ರಕ್ಷಣೆ ಪಡೆಯಲು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಶೇ 85ರಷ್ಟು ಜನರು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಇದು ನಾವೆಲ್ಲ ಹೆಮ್ಮೆ ಪಡಬೇಕಾದ ವಿಚಾರವಾಗಿದೆ ಎಂದು ತಿಳಿಸಿದರು. ಕೋವಿಡ್ ಟೆಸ್ಟಿಂಗ್, ಟ್ರ್ಯಾಕಿಂಗ್ ಹಾಗೂ ಟ್ರೀಟ್‌ಮೆಂಟ್‌ಗೆ ಹೆಚ್ಚಿನ ಒತ್ತು ನೀಡುವಂತೆ ಸಲಹೆ ನೀಡಿದರು.
ದೇಶದ ಎಲ್ಲಾ ರಾಜ್ಯ ಸರ್ಕಾರಗಳೂ ತಮ್ಮ ತಮ್ಮ ರಾಜ್ಯದಲ್ಲಿ ಆಸ್ಪತ್ರೆಗಳನ್ನು ಸಜ್ಜಾಗಿ ಇಟ್ಟುಕೊಳ್ಳಬೇಕು. ಆಸ್ಪತ್ರೆಗಳಲ್ಲಿ ಅಗ್ನಿ ಅನಾಹುತ ಸಂಭವಿಸದಂತೆ ಸೂಕ್ತ ಪರಿಶೀಲನೆ ನಡೆಸಬೇಕು. ದೇಶಾದ್ಯಂತ ಬೇಸಿಗೆಯ ಉಷ್ಣ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಇದು ಅತ್ಯಗತ್ಯವಾಗಿದೆ. ಕೋವಿಡ್ 4ನೇ ಅಲೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡುವುದೇ ನಮ್ಮ ಗುರಿ ಹಾಗೂ ಜವಾಬ್ದಾರಿ ಆಗಿರಬೇಕು ಎಂದು ಹೇಳಿದ್ದಾರೆ.
ಕೊರೊನಾ ವೈರಸ್ 4ನೇ ಅಲೆ ನಿರ್ವಹಣೆ ವೇಳೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಡುವಣ ಸಮನ್ವಯತೆ ಅತಿ ಮುಖ್ಯವಾಗಿದೆ. ರಷ್ಯಾ – ಉಕ್ರೇನ್ ಸಮರದಿಂದಾಗಿ ಸಾಮಗ್ರಿಗಳ ಸರಬರಾಜಿಗೆ ಹಲವು ಅಡ್ಡಿ ಆತಂಕಗಳು ಇವೆ. ಇಷ್ಟಾದರು ಪರಸ್ಪರ ಸಹಕಾರದೊಂದಿಗೆ ಅವು ಮುನ್ನಡೆಯಬೇಕಿದೆ. ಆರೋಗ್ಯ ವಲಯಕ್ಕೆ ಹೆಚ್ಚಿನ ಜನರನ್ನ ಸೇರ್ಪಡೆ ಮಾಡಿ, ಔಷಧ ಹಾಗೂ ಮೂಲಭೂತ ಸಲಕರಣೆಗಳನ್ನು ವೃದ್ಧಿಸಿ ಎಂದು ಸಲಹೆ ನೀಡಿದ್ದಾರೆ.
ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಳೆದ ನವೆಂಬರ್ ತಿಂಗಳಿನಲ್ಲೇ ಇಳಿಸಿದೆ. ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರಗಳೂ ಕೂಡಾ ತೆರಿಗೆ ಕಡಿತ ಮಾಡಬೇಕೆಂದು ಮೋದಿ ಮನವಿ ಮಾಡಿದರು.
ನಾನು ಯಾವುದೇ ರಾಜ್ಯದ ಮುಖ್ಯಮಂತ್ರಿಗಳ ವಿರುದ್ಧ ಟೀಕೆ ಮಾಡುತ್ತಿಲ್ಲ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರ ಪ್ರದೇಶ, ಕೇರಳ, ಜಾರ್ಖಂಡ್ ಹಾಗೂ ತಮಿಳುನಾಡು ಸರ್ಕಾರಗಳು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ ಕಡಿತ ಮಾಡುವ ಮೂಲಕ ಜನತೆಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.