| ಉಡುಪಿ ಎ.27(ಉಡುಪಿ ಟೈಮ್ಸ್ ವರದಿ): ಪೂತ್ತೂರಿನ ಸಂತೆಕಟ್ಟೆ, ಹೈವೆ ಗ್ಯಾರೇಜ್ ಸಮೀಪ ನಿಂತಿದ್ದ ವ್ಯಕ್ತಿಗೆ ಟೂರಿಸ್ಟ್ ಬಸ್ ಡಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟ ಐದು ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪ್ರಭಾಕರ ಎಂಬಾತನಿಗೆ 1ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ತನಿಖೆ ನಡೆಸಿದ ಉಡುಪಿ ಪೊಲೀಸ್ ವೃತ್ತ ನಿರೀಕ್ಷಕರಾದ ನವೀನಚಂದ್ರ ಜೋಗಿ ಅವರು, ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ಯಾಮ್ ಪ್ರಕಾಶ ಅವರು, ಆರೋಪಿಯ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎ.19 ರಂದು 2 ವರ್ಷದ ಕಾರಾಗೃಹ ವಾಸ ಶಿಕ್ಷೆ ಮತ್ತು 10,000 ರೂ ದಂಡ ವಿಧಿಸಿ ತೀರ್ಪನ್ನು ನೀಡಿ ಆದೇಶವನ್ನು ಮಾಡಿದ್ದಾರೆ.
ಪ್ರಕರಣದ ವಿಚಾರಣೆ ವೇಳೆ ಸಹಾಯಕ ಸರ್ಕಾರಿ ಅಭಿಯೋಜಕರಾದ ಮೋಹಿನಿ ಕೆ ವಾದಿಸಿದ್ದರು. 2017 ರ ಜ.9 ರಂದು ಆರೋಪಿ ಪ್ರಭಾಕರ ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಟೂರಿಸ್ಟ್ ಬಸ್ಸನ್ನು ಅತೀವೇಗ, ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯವುಂಟಾಗುವ ರೀತಿಯಲ್ಲಿ ರಸ್ತೆಯಲ್ಲಿ ಚಲಾಯಿಸಿಕೊಂಡು ಬಂದು ಪೂತ್ತೂರಿನ ಸಂತೆಕಟ್ಟೆ, ಹೈವೆ ಗ್ಯಾರೇಜ್ ಸಮೀಪ ನಿಂತಿದ್ದ ಜಿ ನಾಗರಾಜ ಎಂಬವರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ನಾಗರಾಜ್ ಅವರು ರಸ್ತೆಗೆ ಬಿದ್ದು ಅವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. | |