ಉಡುಪಿ ಅಪಘಾತ ಪ್ರಕರಣ- ಆರೋಪಿಗೆ 2 ವರ್ಷ ಜೈಲು ಶಿಕ್ಷೆ
ಉಡುಪಿ ಎ.24 (ಉಡುಪಿ ಟೈಮ್ಸ್ ವರದಿ): ಪೂತ್ತುರಿನ ರೊಬೋಸಾಫ್ಟ್ ಕಂಪೆನಿಯ ಎದುರು ಐದು ವರ್ಷಗಳ ಹಿಂದೆ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗೆ 1ನೇ ಹೆಚ್ಚುವರಿ ಸಿಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರತಾಪ ಸುದರ್ಶನ ಶೆಟ್ಟಿ ಪ್ರಕರಣದ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ವಿರುದ್ಧ ಉಡುಪಿ ಪೊಲೀಸ್ ವೃತ್ತ ನಿರೀಕ್ಷಕರಾದ ನವೀನಚಂದ್ರ ಜೋಗಿ ರವರು ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ಯಾಮ್ ಪ್ರಕಾಶ ಅವರು, ಈ ಪ್ರಕರಣದ ಆರೋಪಿಯ ವಿರುದ್ಧದ ಆರೋಪವು ರುಜುವಾತಾದ ಹಿನ್ನೆಲೆಯಲ್ಲಿ ಎ.18 ರಂದು ಆರೋಪಿಗೆ 2 ವರ್ಷದ ಕಾರಾಗೃಹ ವಾಸ ಶಿಕ್ಷೆ ಮತ್ತು 11,500 ರೂ ದಂಡ ವಿಧಿಸಿ ತೀರ್ಪನ್ನು ನೀಡಿ ಆದೇಶವನ್ನು ಮಾಡಿದ್ದಾರೆ. ಪ್ರಕರಣದ ವಿಚಾರಣೆ ಯಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಮೋಹಿನಿ ಕೆ ಅವರು ವಾದವನ್ನು ಮಂಡಿಸಿರುತ್ತಾರೆ.
2017 ರ ಅ.21 ರಂದು ಉಡುಪಿಯಿಂದ ಸಂತೆಕಟ್ಟೆ, ಕಡೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ತನ್ನ ಬೈಕ್ ನಲ್ಲಿ ಜಯಲಕ್ಷ್ಮೀ ಎಂಬವರನ್ನು ಸಹಸವಾರರಾಗಿ ಕುಳ್ಳಿರಿಸಿಕೊಂಡು ಅಂಬಾಗಿಲು ಕಡೆಯಿಂದ ಸಂತೆಕಟ್ಟೆ ಕಡೆಗೆ ಅತೀ ವೇಗವಾಗಿ ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯವುಂಟಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪೂತ್ತುರು ಗ್ರಾಮದ ರೊಬೋಸಾಫ್ಟ್ ಟೆಕ್ನಾಲಜೀಸ್ ಕಂಪನಿಯ ಕಟ್ಟಡದ ಎದುರು ಎದುರಿನಿಂದ ಬರುತ್ತಿದ್ದ ಚಂದ್ರಾವತಿಯವರ ಸ್ಕೂಟರ್’ಗೆ ಡಿಕ್ಕಿ ಹೊಡೆದ ಪರಿಣಾಮ ಜಯಲಕ್ಷ್ಮಿ ಹಾಗೂ ಚಂದ್ರಾವತಿಯವರು ರಸ್ತೆಗೆ ಬಿದ್ದಿದ್ದರು. ಈ ಪೈಕಿ ಜಯಲಕ್ಷ್ಮೀ ಅವರು ಗಂಭೀರ ಗಾಯಗೊಂಡು ಮೃತಪಟ್ಟಿದ್ದರು. ಆರೋಪಿಯು ಅಪಘಾತ ನಡೆಸಿದ್ದು ಮಾತ್ರವಲ್ಲದೆ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸದೇ ಸ್ಥಳದಿಂದ ಪರಾರಿಯಾಗಿದ್ದ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.