ದಿವ್ಯಾ ಹಾಗರಗಿ ಮತ್ತು ಡಿಕೆಶಿ ಫೋಟೋ ವೈರಲ್: ನನಗೆ ನೋಟಿಸ್ ನೀಡಿ ತನಿಖೆ ಮಾಡಲಿ- ಡಿಕೆಶಿ ಸವಾಲು

ಬೆಂಗಳೂರು, ಎ.26: ಪಿಎಸ್ಸೈ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಜತೆಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು.

ಇದೀಗ ಈ ಫೋಟೋ ಕುರಿತಾಗಿ ಸ್ವತಃ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ತನಿಖಾಧಿಕಾರಿಗಳು ನನಗೆ ನೋಟಿಸ್ ನೀಡಿ ಕರೆದು, ತನಿಖೆ ಮಾಡಲಿ’ ಎಂದು ಸವಾಲು ಹಾಕಿದ್ದಾರೆ. ಈ ವಿಚಾರವಾಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಬಿಜೆಪಿ ಇದೇ ವಿಚಾರವನ್ನು ಮುಂದಿಟ್ಟುಕೊಂಡು ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ಅವರು ನಮ್ಮ ಹೆಸರನ್ನು ಆಗಾಗ್ಗೆ ನೆನಪಿಸಿಕೊಳ್ಳುತ್ತಿರಬೇಕು, ನಮ್ಮ ಫೋಟೋ ಹಾಕಿಕೊಂಡು ಪ್ರಚಾರ ಮಾಡುತ್ತಿರಬೇಕು’ ಎಂದು ಶಿವಕುಮಾರ್ ಛೇಡಿಸಿದರು. ಹಾಗೂ ‘ನನ್ನನ್ನು ಬಹಳ ಮಂದಿ ಭೇಟಿ ಮಾಡುತ್ತಾರೆ. ಈ ಫೋಟೋ ಯಾವುದು ಎಂದು ನನಗೆ ಗೊತ್ತಿಲ್ಲ. ಈಗ ನಮ್ಮ ಸ್ನೇಹಿತರು ಈ ವಿಚಾರದ ಬಗ್ಗೆ ಹೇಳಿದ್ದಾರೆ, ಸಂತೋಷ. ಪೊಲೀಸ್ ಅಧಿಕಾರಿಗಳು ಮೊದಲು ನನಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಲಿ. ನಾನು ಮಂತ್ರಿಯಾಗಿ ಕೆಲಸ ಮಾಡಿದವನು. ಅವರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ನಿಯೋಗದೊಂದಿಗೆ ಬಂದಿದ್ದರು, ತಮ್ಮ ಸಮಸ್ಯೆ ಹೇಳಿಕೊಂಡು ಹೋದರು, ಅಷ್ಟೇ’ ಎಂದು ಸ್ಪಷ್ಟಣೆ ನೀಡಿದರು.

Leave a Reply

Your email address will not be published. Required fields are marked *

error: Content is protected !!