| ನವದೆಹಲಿ ಎ.26: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿರುವ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಮೇಲ್ಮನವಿಯ ವಿಚಾರಣೆ ಶೀಘ್ರವೇ ನಡೆಸುವುದಾಗಿ ಸುಪ್ರೀಂಕೋರ್ಟ್ ಕೋರ್ಟ್ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚೀಫ್ ಜಸ್ಟೀಸ್ ಎನ್ ವಿ ರಮಣ ಅವರು, ಎರಡು ದಿನದ ನಂತರ ಕೂಡಲೇ ವಿಚಾರಣೆ ನಡೆಸಲು ಲಿಸ್ಟ್ ಗೆ ಸೇರಿಸುವುದಾಗಿ ತಿಳಿಸಿದ್ದರು. ಶಾಲಾ-ಕಾಲೇಜುಗಳಲ್ಲಿ ಎಲ್ಲರೂ ಸಮವಸ್ತ್ರವನ್ನು ಧರಿಸಬೇಕೆಂಬ ನಿಯಮವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದ್ದು, ಹಿಜಾಬ್ ಧರಿಸುವುದನ್ನು ನಿಷೇಧಿಸಿ ತೀರ್ಪು ನೀಡಿರುವುದರ ವಿರುದ್ಧ ಹಲವಾರು ಮೇಲ್ಮನವಿ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಕೆಯಾಗಿತ್ತು. ಈ ವಿಚಾರವಾಗಿ ಕಾಲೇಜುಗಳಲ್ಲಿ ತರಗತಿಯೊಳಗೆ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಸಲ್ಲಿಸಲಾಗಿರುವ ಮೇಲ್ಮನವಿಯ ಕುರಿತು ಹಿರಿಯ ವಕೀಲರಾದ ಮೀನಾಕ್ಷಿ ಆರೋರಾ ಗಮನಸೆಳೆದಿದ್ದರು.
ಇನ್ನು ಸರ್ಕಾರ ಮಲತಾಯಿ ಧೋರಣೆ ತಳೆಯುವ ಮೂಲಕ ವಿದ್ಯಾರ್ಥಿಗಳ ಧಾರ್ಮಿಕ ನಂಬಿಕೆಯನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿದ್ದು, ಇದರ ಪರಿಣಾಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತೆ ಮಾಡಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಹಾಗೂ ಹಿಜಾಬ್ ಅಥವಾ ತಲೆಗೆ ಸ್ಕಾರ್ಫ್ ಧರಿಸುವುದು ಇಸ್ಲಾಂನ ಅತ್ಯಗತ್ಯ ಸಂಪ್ರದಾಯಗಳಲ್ಲಿ ಒಂದಾಗಿದೆ. ಅಲ್ಲದೇ ಸಾಂವಿಧಾನಿಕವಾಗಿಯೂ ಧಾರ್ಮಿಕ ನೆಲೆಗಟ್ಟಿನಲ್ಲಿ ಸಂಪ್ರದಾಯದ ಆಚರಣೆಗೆ ಅವಕಾಶ ಇದ್ದಿರುವುದಾಗಿ ಅರ್ಜಿದಾರರು ವಾದಿಸಿರುವುದಾಗಿ ವರದಿ ವಿವರಿಸಿದೆ.
| |