| ಮುಂಬೈ, ಎ.26: ದೇಶದಲ್ಲಿ ನಿರುದ್ಯೋಗ ಸಮಸ್ಯೆಯಿಂದ ಕಂಗೆಟ್ಟಿದ್ದ ಭಾರತದ 90 ಕೋಟಿ ಶ್ರಮಿಕರಲ್ಲಿ ಬಹುತೇಕರು ಉದ್ಯೋಗ ಲಭ್ಯತೆಯ ನಿರಾಸೆಯಿಂದ ಉದ್ಯೋಗಗಳ ಹುಡುಕಾಟವನ್ನೇ ನಿಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಮುಂಬೈನ ಖಾಸಗಿ ಸಂಶೋಧನಾ ಸಂಸ್ಥೆ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ)ಯ ವರದಿಯ ಹೊಸ ದತ್ತಾಂಶಗಳ ಪ್ರಕಾರ, ಸೂಕ್ತ ಉದ್ಯೋಗವನ್ನು ಹುಡುಕಲು ಸಾಧ್ಯವಾಗದೆ ಹತಾಶರಾಗಿರುವ ಮಿಲಿಯಗಟ್ಟಲೆ ಭಾರತೀಯರು, ವಿಶೇಷವಾಗಿ ಮಹಿಳೆಯರು ಶ್ರಮಿಕ ವರ್ಗದಿಂದ ಸಂಪೂರ್ಣವಾಗಿ ನಿರ್ಗಮಿಸಿದ್ದಾರೆ.
2017 ಮತ್ತು 2022ರ ನಡುವೆ ಒಟ್ಟಾರೆ ಕಾರ್ಮಿಕ ಪಾಲ್ಗೊಳ್ಳುವಿಕೆಯ ದರವು ಶೇ.46 ರಿಂದ ಶೇ.40 ಕ್ಕೆ ಕುಸಿದಿದೆ. ಮಹಿಳೆಯರಲ್ಲಿ ಈ ದತ್ತಾಂಶವು ಇನ್ನೂ ಶೋಚನೀಯವಾಗಿದೆ. ಸುಮಾರು 21 ಮಿಲಿಯ ಮಹಿಳೆಯರು ಕಾರ್ಮಿಕ ಪಡೆಯಿಂದ ಕಣ್ಮರೆಯಾಗಿದ್ದು, ಕೇವಲ ಶೇ.9ರಷ್ಟು ಅರ್ಹ ಮಹಿಳೆಯರು ಉದ್ಯೋಗಗಳಲ್ಲಿದ್ದಾರೆ ಅಥವಾ ಹುದ್ದೆಗಳನ್ನು ಹುಡುಕುತ್ತಿದ್ದಾರೆ. ಹಾಗೂ ಈಗ ಕಾನೂನುಬದ್ಧ ದುಡಿಯುವ ವಯಸ್ಸಿನ 90 ಕೋ.ಭಾರತೀಯರ ಪೈಕಿ ಅರ್ಧದಷ್ಟು, ಅಂದರೆ ಸರಿಸುಮಾರು ಅಮೆರಿಕ ಮತ್ತು ರಶ್ಯದ ಒಟ್ಟು ಜನಸಂಖ್ಯೆಯಷ್ಟು ಜನರು ಉದ್ಯೋಗಗಳನ್ನು ಬಯಸುತ್ತಿಲ್ಲ ಎಂದು ಸಿಎಂಐಇ ಹೇಳಿದೆ.
ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ವಿಸ್ತರಿಸುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿರುವ ಭಾರತವು ತನ್ನ ಬೆಳವಣಿಗೆಯನ್ನು ಹೆಚ್ಚಿಸಿಕೊಳ್ಳಲು ಯುವಜನರನ್ನೇ ನೆಚ್ಚಿಕೊಂಡಿರುವ ಹಿನ್ನೆಲೆಯಲ್ಲಿ ಇತ್ತೀಚಿನ ಅಂಕಿ ಅಂಶಗಳು ಅಶುಭ ಮುನ್ಸೂಚಕಗಳಾಗಿವೆ. ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಭಾರತವು ಎದುರಿಸುತ್ತಿರುವ ಸವಾಲುಗಳು ಸ್ಪಷ್ಟವಾಗಿವೆ. ಜನಸಂಖ್ಯೆಯ ಸುಮಾರು ಎರಡು ಮೂರನೇ ಭಾಗವು 15ರಿಂದ 64 ವರ್ಷಗಳ ವಯೋಮಿತಿಯಲ್ಲಿದ್ದು, ಸಣ್ಣ ದುಡಿಮೆಯಾಚೆಗೆ ಸ್ಪರ್ಧೆಯು ತೀವ್ರವಾಗಿದೆ. ಸರಕಾರದಲ್ಲಿಯ ಕಾಯಂ ಹುದ್ದೆಗಳಿಗೆ ಲಕ್ಷಾಂತರ ಅರ್ಜಿಗಳು ಬರುವುದು ಸಾಮಾನ್ಯವಾಗಿದೆ ಮತ್ತು ಉನ್ನತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶವು ಕಾರ್ಯತಃ ಅನಿಶ್ಚಿತತೆಯಿಂದ ಕೂಡಿದೆ.
ಮೆಕಿನ್ಸೆ ಗ್ಲೋಬಲ್ ಇನ್ಸ್ಟಿಟ್ಯೂಟ್ ವರದಿಯಂತೆ ಭಾರತವು ತನ್ನ ಯುವಜನರಿಗಾಗಿ 2030ರ ವೇಳೆಗೆ ಕನಿಷ್ಠ 90 ಮಿಲಿಯನ್ ಕೃಷಿಯೇತರ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯವಿದೆ ಮತ್ತು ಇದಕ್ಕಾಗಿ ವಾರ್ಷಿಕ ಜಿಡಿಪಿ ಬೆಳವಣಿಗೆಯು ಶೇ.8ರಿಂದ ಶೇ.8.5 ರಷ್ಟಿರಬೇಕಾಗುತ್ತದೆ. ಯುವಜನರಿಗೆ ಉದ್ಯೋಗಗಳನ್ನು ಒದಗಿಸುವಲ್ಲಿ ವೈಫಲ್ಯವು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರುವ ಭಾರತದ ಗುರಿಯನ್ನು ದಿಕ್ಕು ತಪ್ಪಿಸಬಹುದು.
ಆರ್ಥಿಕತೆಯ ಉದಾರೀಕರಣದಲ್ಲಿ ದೇಶವು ದಾಪುಗಾಲನ್ನಿಟ್ಟಿದ್ದರೂ, ಆ್ಯಪಲ್ ಮತ್ತು ಅಮೆಝಾನ್ ನಂತಹ ಸಂಸ್ಥೆಗಳಿಂದ ಹೂಡಿಕೆಗಳನ್ನು ಆಕರ್ಷಿಸಿದ್ದರೂ ಭಾರತದ ಅವಲಂಬನೆ ಅನುಪಾತವು ಶೀಘ್ರವೇ ಏರಲು ಆರಂಭಿಸಲಿದೆ. ತನ್ನ ಜನಸಂಖ್ಯಾ ಲಾಭಾಂಶವನ್ನು ಪಡೆದುಕೊಳ್ಳುವಲ್ಲಿ ದೇಶವು ವಿಫಲಗೊಳ್ಳ ಬಹುದು ಎಂದು ಆರ್ಥಿಕ ತಜ್ಞರು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡುವ ಬೆಂಗಳೂರಿನ ಅರ್ಥಶಾಸ್ತ್ರಜ್ಞ ಕುನಾಲ್ ಕುಂಡು ಅವರು, ಕಾರ್ಮಿಕ ವರ್ಗದ ಹೆಚ್ಚಿನ ಪಾಲು ನಿರುತ್ಸಾಹಗೊಂಡಿರುವುದು ಭಾರತವು ತನ್ನ ಯುವ ಜನಸಂಖ್ಯೆಯಿಂದ ಲಾಭವನ್ನು ಪಡೆಯುವ ಸಾಧ್ಯತೆಯಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಭಾರತವು ಮಧ್ಯಮ ಆದಾಯದ ಬಲೆಯಲ್ಲಿಯೇ ಉಳಿಯಲಿದೆ ಎನ್ನುತ್ತಾರೆ.
| |