| ಉಡುಪಿ ಎ.26: ಈ ಹಿಂದೆ ಅನೇಕ ಮುಸ್ಲಿಂ ಮಹಿಳೆಯರ ದಾಂಪತ್ಯ ಜೀವನಕ್ಕೆ ಉರುಳಾಗಿದ್ದ ತ್ರಿವಳಿ ತಲಾಕ್ ನ್ನು ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿತ್ತು. ಇದು ಮುಸ್ಲಿಂ ಮಹಿಳೆಯರ ಪಾಲಿಗೆ ನಿಜಕ್ಕೂ ಸಂಭ್ರಮದ ಕ್ಷಣವಾಗಿದ್ದು. ಈ ದಿನ ಮುಸ್ಲಿಂ ಮಹಿಳೆಯರು ಸಿಹಿ ಹಂಚಿ ಸಂಭ್ರಮಿಸಿದ್ದನ್ನು ಮರೆಯುವಂತಿಲ್ಲ.
ಇದೀಗ ತ್ರಿವಳಿ ತಲಾಲ್ ನಂತೆಯೇ ಮುಸ್ಲಿಂ ಸಮುದಾಯದಲ್ಲಿ ಜೀವಂತವಾಗಿರುವ ಬಹುಪತ್ನಿತ್ವ ಪದ್ದತಿಯನ್ನೂ ನಿರ್ಮೂಲನೆ ಮಾಡುವಂತೆ ಮುಸ್ಲಿಂ ಕುಟುಂಬವೊಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರಬರೆದಿದೆ ಎಂಬ ಸುದ್ದಿ ವರದಿಯಾಗಿದೆ. ಈ ಬಗ್ಗೆ ಪ್ರಧಾನಿಗೆ ಮನವಿ ಮಾಡಿಕೊಂಡು ಬರೆದಿರುವ ಪತ್ರದಲ್ಲಿ ನನ್ನ ಪತ್ನಿಯನ್ನು ರಾಜಕೀಯ ಮುಖಂಡನೊಬ್ಬ ಪುಸಲಾಯಿಸಿ ಕರೆದೊಯ್ದಿದ್ದಾನೆ. ಮುಸ್ಲಿಂ ಸಮುದಾಯದ ಬಹುಪತ್ನಿತ್ವ ಪದ್ದತಿಯಿಂದಲೇ ಈ ರೀತಿ ನಡೆಯಬಾರದ್ದು ನಡೆಯುತ್ತಿದೆ. ಹೀಗಾಗಿ ತಲಾಖ್ ನಿಷೇಧದಂತೆ ಬಹುಪತ್ನಿ ಪದ್ಧತಿಯನ್ನು ಕೂಡಾ ನಿಷೇಧ ಮಾಡಿ ಎಂದು ಉಡುಪಿಯ ಮುಸ್ಲಿಂ ಕುಟುಂಬವೊಂದು ಮನವಿ ಮಾಡಿಕೊಂಡಿದೆ.
ವೃತ್ತಿಯಲ್ಲಿ ಡ್ರೈವರ್ ಆಗಿರುವ ಮಹಮ್ಮದ್ ಇಲಿಯಾಸ್ ಎಂಬವರು ಹಲವು ವರ್ಷಗಳಿಂದ ಇಷ್ಟಪಟ್ಟ ಯುವತಿಯನ್ನು ನಾಲ್ಕು ವರ್ಷದ ಹಿಂದೆ ಮದುವೆಯಾಗಿ ಒಂದು ಗಂಡು ಮಗುವಿನ ಜೊತೆ ಸುಖ ಸಂಸಾರವನ್ನು ನಡೆಸುತ್ತಿದ್ದರು. ಆದರೆ ಅದು ಯಾವಾಗ ಈತನ ಸಂಸಾರದ ಮೇಲೆ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ. ಈತನ ಪತ್ನಿ ಸಂಸಾರ ತೊರೆದು, ಮದುವೆಯಾಗಿ 3 ಮಕ್ಕಳಿರುವ ಶಾಫಿ ಕಲಂದರ್ ಎಂಬಾತನ ಜೊತೆ ಹೋಗಿದ್ದಾಳೆ ಎಂದು ಇಲಿಯಾಸ್ ಆರೋಪಿಸಿದ್ದಾರೆ.
ಹಾಗೂ ಈ ಶಾಫಿ ಕಲಂದರ್ ಪಡುಬಿದ್ರಿ ಪರಿಸರದಲ್ಲಿ ಕಾಂಗ್ರೆಸ್ ಬೆಂಬಲಿತ ಪಂಚಾಯತ್ ಸದಸ್ಯನಾಗಿ ದ್ದಾನೆ. ನೀನು ಜೀನತ್ ಗೆ ತಲಾಕ್ ನೀಡದೆ ಇದ್ದರೆ ನಿನ್ನ ಮಗುವನ್ನು ಸ್ಲೋ ಪಾಯೀಜನ್ ಕೊಟ್ಟು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಅಲ್ಲದೆ ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ದೂರು ನೀಡಿದರೂ ಪೊಲೀಸರು ಕೂಡ ಶಾಫಿ ಪರ ನಿಂತಿದ್ದಾರೆ ಎಂದು ಇಲಿಯಾಸ್ ಮಾಧ್ಯಮದ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.
ಶಾಫಿ ಕಲಂದರ್ ಮೊದಲ ಮಗಳಿಗೆ 18 ವರ್ಷ ವಯಸ್ಸು. ಈಗ ಆತ ಕರೆದುಕೊಂಡು ಹೋಗಿರುವ ಜೀನತ್ 22 ವರ್ಷದವಳು. ತನ್ನ ಮಗಳ ವಯಸ್ಸಿನ ಯುವತಿಯ ಜೊತೆ ಮದುವೆಯಾಗಲು ಮುಂದಾಗಿರುವ ಶಾಫಿ ಕಲಂದರ್ ಗೆ ಕಾನೂನಿನ ಬೆಂಬಲವೂ ಇದೆ. ಮುಸ್ಲಿಂ ಸಮುದಾಯದಲ್ಲಿ ಒಂದಕ್ಕಿಂತ ಹೆಚ್ಚು ಮದುವೆ ಯಾಗಲು ಅವಕಾಶ ಇರುವುದರಿಂದ ಶಾಫಿ ಕಲಂದರ್ ನ ಮೊದಲ ಪತ್ನಿ ಮತ್ತು ಇತ್ತ ಹೆಂಡತಿಯನ್ನು ಕಳೆದುಕೊಂಡ ಇಲಿಯಾಸ್ ಇಬ್ಬರು ಅಸಹಾಯಕರಾಗಿದ್ದಾರೆ.
ಈ ನಡುವೆ ಘಟನೆಗೆ ಸಂಬಂಧಿಸಿ ಪ್ರಧಾನಿ ಮೋದಿಯವರು ತ್ರಿವಳಿ ತಲಾಕ ನಿಷೇಧ ಮಾಡಿದಂತೆ ಮುಸ್ಲಿಂ ಸಮಾಜದಲ್ಲಿರುವ ಬಹುಪತ್ನಿತ್ವ ಪದ್ಧತಿಯನ್ನು ನಿಷೇಧ ಮಾಡಬೇಕು ಎಂದು ಇಲಿಯಾಸ್ ಅಕ್ಕ ಆಯೇಷಾ ಸರಕಾರಕ್ಕೆ ಮನವಿ ಮಾಡಿದ್ದಾರೆ. ಈ ಕೌಟುಂಬಿಕ ಕಲಹದ ಆರೋಪ ಕೇಳಿ ಬರುತ್ತಿದ್ದಂತೆ, ಜಿನತ್ ಅಲರ್ಟ್ ಆಗಿದ್ದಾಳೆ. ತನ್ನ ಪತಿ ಇಲಿಯಾಸ್ ಮತ್ತು ಆತನ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಸೇರಿದಂತೆ ಕೌಟುಂಬಿಕ ಹಿಂಸೆ ಹಲ್ಲೆ ಇತ್ಯಾದಿ ಪ್ರಕರಣಗಳನ್ನು ದಾಖಲಿಸಿದ್ದಾಳೆ.
ಪತಿ, ನಾದಿನಿಯರು, ಭಾವಂದಿರು, ಅತ್ತೆ ನಾನಾ ರೀತಿಯಲ್ಲಿ ಕಿರುಕುಳ ನೀಡಿರುವುದಾಗಿ ಪಡುಬಿದ್ರಿ ಠಾಣೆಯಲ್ಲಿ ದೂರು ನೀಡಿದ್ದಾಳೆ. ಒಟ್ಟಿನಲ್ಲಿ ಗಂಡನಿಗೆ ತಲಾಕ್ ನೀಡದೆ ಇನ್ನೊಬ್ಬನ ಜೊತೆ ಹೋಗಿರುವ ಜೀನತ್ ನಡೆ ಪೊಲೀಸರಿಗೆ ಬಗೆಹರಿಸಲಾಗದ ಕಗ್ಗಂಟಾಗಿದೆ. ಇತ್ತ ಇಲಿಯಾಸ್ ಕೂಡ ನನಗೆ ನನ್ನ ಪತ್ನಿ ಬೇಕು ಎಂದು ಹೋರಾಟ ನಡೆಸುತ್ತಿದ್ದಾರೆ. ಪ್ರಕರಣದ ಸತ್ಯಾಸತ್ಯತೆಯ ಬಗ್ಗೆ ಪೊಲೀಸ್ ತನಿಖೆ ನಡೆಸುತ್ತಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದ ಕೌಟುಂಬಿಕ ಕಲಹದ ನಡುವೆ ಬಹುಪತ್ನಿತ್ವ ರದ್ಧತಿಯ ಬೇಡಿಕೆಯೊಂದು ಮತ್ತೆ ಜೀವ ಪಡೆದುಕೊಂಡಿದೆ. ಇನ್ನು ಪ್ರಕರಣದ ಸತ್ಯಾಸತ್ಯತೆ ಪೊಲೀಸ್ ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.
| |