ಲಾಕ್ಡೌನ್: ಮೀನುಗಾರ ಮಹಿಳೆಯರಿಗೆ ಸೂಕ್ತ ಪರಿಹಾರ ನೀಡಲು ಸಭಾಪತಿ ಆಗ್ರಹ
ಉಡುಪಿ: ರಾಜ್ಯದ ಬಿಜೆಪಿ ಸರಕಾರ ಕರ್ನಾಟಕದ ಮೀನುಗಾರರನ್ನು ತೀವ್ರವಾಗಿ ಅವಗಣನೆ ಮಾಡಿದ್ದು ಕೊರೋನಾ ಮಹಾಮಾರಿಯಿಂದ ಉದ್ಭವವಾಗಿರುವ ಲಾಕ್ಡೌನ್ ನಿಂದ ಆಗಿರುವ ತೀವ್ರ ನಷ್ಟಕ್ಕೆ ಯಾವುದೇ ಪರಿಹಾರ ನೀಡದೆ ಇರುವುದಕ್ಕೆ ಅಖಿಲ ಭಾರತ ಮೀನುಗಾರ ಕಾಂಗ್ರೆಸ್ ಸಮಿತಿಯ ನಾಯಕ, ಮಾಜಿ ಶಾಸಕ ಯು. ಆರ್. ಸಭಾಪತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಜನವರಿ, ಫೆಬ್ರವರಿ, ಮಾರ್ಚ್ ತಿಂಗಳು ಸೇರಿದಂತೆ ಈ ವರೆಗೆ ಮೀನುಗಾರರಿಗೆ ಸಲ್ಲಬೇಕಾಗಿರುವ ಡೀಸೆಲ್ ಸಬ್ಸಿಡಿ ಈವರೆಗೆ ಅದೂ ಈ ಸಂಕಷ್ಟ ಪರಿಸ್ಥಿತಿ ಯಲ್ಲಿಯೂ ಬಿಡುಗಡೆ ಗೊಳಿಸದೆ ಇರುವುದು ಅಕ್ಷಮ್ಯ ಎಂದು ಸಭಾಪತಿ ಹೇಳಿದ್ದಾರೆ. ಬಿಡುಗಡೆಗೊಳಿಸ ಬೇಕಾಗಿರುವ ಡೀಸೆಲ್ ಸಬ್ಸಿಡಿ ಯನ್ನು ಈ ಕೂಡಲೇ ಬಿಡುಗಡೆ ಮಾಡುವುದಲ್ಲದೆ, ಕೊರೋನಾ ಲಾಕ್ಡೌನ್ ಸಮಯದ ಮೂರು ತಿಂಗಳ ಸಾಲದ ಕಂತುಗಳನ್ನು ಬಡ್ಡಿ ಸಹಿತ ಮನ್ನಾ ಮಾಡುವಂತೆ ಕೇಂದ್ರ ಸರಕಾರಕ್ಕೆ, ರಾಜ್ಯ ಸರಕಾರ ಶಿಫಾರಸ್ಸು ಮಾಡಬೇಕೆಂದು ರಾಜ್ಯ ಸರಕಾರವನ್ನು ಸಭಾಪತಿ ಆಗ್ರಹಿಸಿದ್ದಾರೆ. ಮೀನುಗಾರ ಮಹಿಳೆಯರಿಗೆ ಮತ್ತು ಮೀನುಗಾರ ಕಾರ್ಮಿಕ ರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸಭಾಪತಿ ಆಗ್ರಹಿಸಿದ್ದರಲ್ಲದೆ ಈ ರೀತಿ ಮೀನುಗಾರರ ಅವಗಣನೆ ಮಾಡಿದಲ್ಲಿ ಕಾಂಗ್ರೆಸ್ ಪಕ್ಷ ತೀವ್ರ ಹೋರಾಟ ಮಾಡುವುದಾಗಿಯೂ ಉಡುಪಿ ಜಿಲ್ಲಾ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರೂ ಆಗಿರುವ ಸಭಾಪತಿ ಎಚ್ಚರಿಸಿದ್ದಾರೆ. |