ಕಟೀಲು: ಯುವಕರನ್ನು ಠಾಣೆಗೆ ಕರೆಯಿಸಿ ಹಲ್ಲೆ ಆರೋಪ- ಇನ್ಸ್ಪೆಕ್ಟರ್ ಸಹಿತ ನಾಲ್ವರ ಅಮಾನತು
ಮಂಗಳೂರು, ಎ.26: ಕಟೀಲು ದೇವಳದ ಎದುರು ಸೀಯಾಳ ಹಾಕುವ ವಿಚಾರಕ್ಕೆ ಸಂಬಂಧಿಸಿ ಮೂವರು ಯುವಕರನ್ನು ಠಾಣೆಗೆ ಕರೆಯಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ಬಜ್ಪೆ ಇನ್ಸ್ಪೆಕ್ಟರ್ ಹಾಗೂ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಕಟೀಲು ಸಮೀಪದ ಮೂವರು ಯುವಕರಿಗೆ ಇನ್ಸ್ಪೆಕ್ಟರ್ ಸಹಿತ ನಾಲ್ವರು ಪೊಲೀಸ್ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಈ ಆರೋಪದ ಬಗ್ಗೆ ಎಸಿಪಿ ಮಹೇಶ್ ಕುಮಾರ್ ವಿಚಾರಣೆ ನಡೆಸಿ ನೀಡಿದ ವರದಿಯ ಆಧಾರದಲ್ಲಿ ಇಲಾಖಾ ಶಿಸ್ತಿನ ಕ್ರಮ, ವಿಚಾರಣೆ ಬಾಕಿಯಿರಿಸಿ ಬಜ್ಪೆ ಇನ್ಸ್ಪೆಕ್ಟರ್ ಸಂದೇಶ್, ಸಿಬ್ಬಂದಿಯಾದ ಪ್ರವೀಣ್, ಸುನೀಲ್ ಹಾಗೂ ಇಮ್ತಿಯಾಝ್ ರನ್ನು ಅಮಾನತು ಗೊಳಿಸಲಾಗಿದೆ. ಕಾನೂನು ಸುವ್ಯವಸ್ಥಾ ವಿಭಾಗದ ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್ ನೇತೃತ್ವದಲ್ಲಿ ಈ ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಲು ಸೂಚಿಸಲಾಗಿದೆ. ಗಾಯಗೊಂಡ ಮೂವರು ಯುವಕರಲ್ಲಿ ಇಬ್ಬರನ್ನು ವೆನ್ಲಾಕ್ ಗೆ, ಇನ್ನೊಬ್ಬರನ್ನು ಕಟೀಲು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಮಹೇಶ ಕಲ್ಲಕುಮೇರು ಕಟೀಲು ಎಂಬಾತ “ಶುಕ್ರವಾರ ರಾತ್ರಿ ದೇವಸ್ಥಾನದ ಬಳಿ ಮುಸ್ಲಿಮರಿಗೆ ಸೇರಿದ್ದ ವಾಹನವೊಂದು ದೇವಸ್ಥಾನಕ್ಕೆ ಎಳೆನೀರು ಹಾಕಲು ಬಂದಿದ್ದರು. ದನ ತಿನ್ನುವ ಕಾರಣ ನೀವು ದೇವಸ್ಥಾನದಲ್ಲಿ ಎಳನೀರು ಹಾಕುವುದು ಬೇಡ ಎಂದು ಅವರನ್ನು ನಾವು ವಾಪಸ್ ಕಳುಹಿಸಿದ್ದೆವು. ಈ ಕಾರಣಕ್ಕೆ ಎಳನೀರು ವಾಹನದವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮರುದಿನ ನನ್ನನ್ನು ಠಾಣೆಗೆ ಕರೆಸಿ ದೌರ್ಜನ್ಯ ಎಸಗಿದ್ದಾರೆ” ಎಂದು ತಿಳಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕೆಯೊಂದಿಗೆ ಮಾತನಾಡಿದ ದೀಪಕ್ ಕಟೀಲು, ನಾನು ಸಂವಿಧಾನಕ್ಕೆ ಮೊದಲೇ ಭಗವದ್ಗೀತೆಯನ್ನು ಓದಿದ್ದೇನೆ. ನನಗೂ ಗೊತ್ತಿದೆ. ಭಗವದ್ಗೀತೆಯಲ್ಲಿ ಇರುವುದೇನು ಅಂತ ಗೊತ್ತಿದೆ. ತಪ್ಪಿರುವುದನ್ನು ಹೇಳಬೇಕು. ಅದನ್ನೇ ನಾನಿಲ್ಲಿ ಹೇಳಿದ್ದೇನೆ. ದನದ ಮಾಂಸ ತಿನ್ನುವ ನೀವು ದೇವಸ್ಥಾನಕ್ಕೆ ಎಳನೀರು ಹಾಕಬೇಡಿ ಮೊದಲೇ ಹೇಳಿದ್ದೆವು. ಶುಕ್ರವಾರ ರಾತ್ರಿಯೂ ಎಳನೀರಿನ ವಾಹನ ಬಂದಾಗ ಅವರನ್ನು ಮಹೇಶ, ವಿಜ್ಞೇಶ, ಯಶ್ ಎಂಬವರು ವಾಪಸ್ ಕಳುಹಿಸಿದ್ದಾರೆ. ಈ ವಿಚಾರವಾಗಿ ಎಳನೀರಿನ ವಾಹನದವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮರುದಿನ ಮಹೇಶ್ನನ್ನು ಠಾಣೆಗೆ ಕರೆಸಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗೂ ಇದಕ್ಕಿಂತ ದೊಡ್ಡ ದೊಡ್ಡ ಕೇಸುಗಳು ಆದಾಗೆಲ್ಲ ನಾವು ಬಜ್ಪೆ ಠಾಣೆಗೆ ಹೋಗಿದ್ದೇವೆ. ಬಿಡಿಸಿಕೊಂಡು ಬಂದಿದ್ದೇವೆ. ಅದೇರೀತಿ ಮಹೇಶ್ ನನ್ನು ಬಿಡಿಸಿಕೊಂಡು ಬರಲೆಂದು ನಾವು ಹೋದಾಗ ಪೊಲೀಸರು ಹೊಡೆದಿದ್ದಾರೆ ಎಂದು ಆರೋಪಿಸಿದರು.