ಪಿಎಸ್ಐ ಪರೀಕ್ಷೆಯ ಅಕ್ರಮ: ಕೋವಿಡ್‌ನಿಂದ ಮೃತಪಟ್ಟ ನೌಕರನ ಮೊಬೈಲ್‌ ಬಳಕೆ!

ಸೆಲ್‌ನಲ್ಲಿ ರುದ್ರಗೌಡ ಕುರ್ಚಿ ಹಾಕಿಕೊಂಡು ಕುಳಿತಿರುವ ಹಾಗೂ ಇನ್ನೊಬ್ಬ ಆರೋಪಿ ಮಲ್ಲಿಕಾರ್ಜುನ ಕೈಕಟ್ಟಿಕೊಂಡು ನಿಂತಿರುವ ಫೋಟೊ

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿಯ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ರುದ್ರಗೌಡ ಡಿ. ಪಾಟೀಲ, ಕೋವಿಡ್‌ನಿಂದ ಮೃತಪಟ್ಟ ತನ್ನ ನೌಕರರೊಬ್ಬರ ಮೊಬೈಲ್‌ ಬಳಸಿಕೊಂಡಿದ್ದಾಗಿ ಹೇಳಿಕೆ ನೀಡಿರುವುದಾಗಿ ಸಿಐಡಿ ಮೂಲಗಳು ತಿಳಿಸಿವೆ.

‘ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದ ಲಕ್ಷ್ಮಿಪುತ್ರ ಎಂಬುವವರು ರುದ್ರಗೌಡ ಬಳಿ ಸೂಪರ್‌ವೈಸರ್‌ ಆಗಿದ್ದರು. ಅವರ ಸಾವಿನ ನಂತರ ರುದ್ರಗೌಡ, ಅವರ ಎರಡು ಮೊಬೈಲ್‌ಗಳನ್ನು ಸಿಮ್ ಸಮೇತ ತೆಗೆದುಕೊಂಡು, ಅಭ್ಯರ್ಥಿಗಳಿಗೆ ಉತ್ತರ ಪೂರೈಸಲು ಬಳಸಿದ್ದ. ಒಂದು ವೇಳೆ ಪ್ರಕರಣ ಹೊರಬಿದ್ದರೂ ತಾನು ಸಿಕ್ಕಿಬೀಳಬಾರದು ಎಂಬ ಉದ್ದೇಶದಿಂದ ಸತ್ತ ವ್ಯಕ್ತಿಯ ಮೊಬೈಲ್‌ ಬಳಸಿದ್ದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ಹಿಂದಿನ ವಿವಿಧ ನೇಮಕಾತಿ ಪರೀಕ್ಷೆಗಳಲ್ಲೂ ಇದೇ ತಂತ್ರ ಬಳಸಿರುವ ಸಾಧ್ಯತೆ ಇದೆ‘ ಎಂದು ಮೂಲಗಳು ತಿಳಿಸಿವೆ.

ಅಭ್ಯರ್ಥಿಗಳ ಬಳಿ ಹಣ ಪಡೆದು ವ್ಯವಹಾರ ಕುದುರಿಸುವಾಗಲೇ ಅವರು ಮತ್ತೊಬ್ಬರ ಮೊಬೈಲ್‌ ತರಬೇಕು ಎಂದು ಷರತ್ತು ಹಾಕುತ್ತಿದ್ದ. ಈಗಾಗಲೇ ಬಂಧಿತನಾಗಿರುವ ಶಾಸಕರ ಗನ್‌ಮ್ಯಾನ್‌ ಹಯ್ಯಾಳಿ ದೇಸಾಯಿ ಪರೀಕ್ಷೆಯಲ್ಲಿ ಇದೇ ತಂತ್ರ ಬಳಸಿದ್ದ’ ಎನ್ನಲಾಗಿದೆ. ಹಯ್ಯಾಳಿಗೆ ಮೊಬೈಲ್‌ ನೀಡಿದ ಆರೋಪದಡಿ ಕಾನ್‌ಸ್ಟೆಬಲ್‌ ರುದ್ರಗೌಡ ಹಾಗೂ ಶರಣಬಸಪ್ಪ ಕೂಡ ಬಂಧಿತರಾಗಿದ್ದಾರೆ.

ಇಲ್ಲಿನ ಜ್ಞಾನಜ್ಯೋತಿ ಅಂಗ್ಲಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳು ಹಾಗೂ ಮೇಲ್ವಿಚಾರಕರ ಮೊಬೈಲ್‌ ಕರೆಗಳನ್ನು ಸಿಐಡಿ ಜಾಲಾಡುತ್ತಿದೆ. ಪರೀಕ್ಷಾ ಸಂದರ್ಭದಲ್ಲಿ ಇವರ ಮೊಬೈಲ್‌ ಸ್ವಿಚ್ಆಫ್‌ ಇತ್ತು ಎಂಬ ದಾಖಲೆ ಸೃಷ್ಟಿ ಮಾಡುವ ಉದ್ದೇಶದಿಂದಲೇ ಬೇರೊಬ್ಬರ ಮೊಬೈಲ್‌ ಬಳಸುವ ತಂತ್ರ ರೂಪಿಸಿದ್ದಾರೆ. ಆದರೆ, ಎಲೆಕ್ಟ್ರಾನಿಕ್‌ ಡಿವೈಸ್‌, ಬ್ಲೂಟೂತ್‌ ಬಳಸಿದ್ದರಿಂದ ‘ಟವರ್‌ಡಂಪ್‌’ ಟೆಕ್ನಾಲಜಿ ಮೂಲಕ ಕರೆಗಳ ಶೋಧ ಸಾಧ್ಯವಾಗಿದೆ ಎನ್ನುತ್ತವೆ ಮೂಲಗಳು.

ಒಡಿಶಾದಿಂದ ಎಲೆಕ್ಟ್ರಾನಿಕ್‌ ಡಿವೈಸ್‌ ಖರೀದಿ: ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ನೀಡಿದ ಎಲೆಕ್ಟ್ರಾನಿಕ್‌ ಡಿವೈಸ್‌ ಗಳನ್ನು ಒಡಿಶಾದಿಂದ ತರಿಸಿದ್ದ. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರ ಮೂಲಕವೇ ಈ ಡಿವೈಸ್‌ಗಳನ್ನು ಅಭ್ಯರ್ಥಿ ಗಳಿಗೆ ತಲುಪಿಸಿದ್ದ. ಎ, ಬಿ, ಸಿ, ಡಿ ಸರಣಿಯಲ್ಲಿರುವ ಪ್ರಶ್ನೆ ಪತ್ರಿಕೆಗಳನ್ನು ಮುಂಚಿತವಾಗಿಯೇ ತರಿಸಿಕೊಂಡಿದ್ದ. ಪರಿಣತರಿಂದ ಸರಿಯಾದ ಉತ್ತರಗಳನ್ನು ಪಡೆದು, ಯಾವ ಅಭ್ಯರ್ಥಿಗೆ ಯಾವ ಸಿರೀಸ್‌ನ ಒಎಂಆರ್‌ ಶೀಟ್‌ ಬರುತ್ತದೆ ಎಂಬುದನ್ನು ತಿಳಿದುಕೊಂಡು, ಅದರ ಉತ್ತರಗಳನ್ನು ತಲುಪಿಸುವ ವ್ಯವಸ್ಥೆ ಮಾಡಿದ್ದ. ಪರೀಕ್ಷೆ ಮುಗಿದ ಬಳಿಕ ಡಿವೈಸ್‌ಗಳನ್ನು ಅಭ್ಯರ್ಥಿಗಳಿಂದ ವಾಪಸ್‌ ಪಡೆದಿದ್ದಾಗಿ ಬಾಯಿಬಿಟ್ಟಿದ್ದಾನೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಠಾಣೆಯಲ್ಲೂ ರುದ್ರಗೌಡ ದರ್ಪ: ಸಿಐಡಿ ಕಸ್ಟಡಿಯಲ್ಲಿರುವ ರುದ್ರಗೌಡನನ್ನು ರಾತ್ರಿ ಇಲ್ಲಿನ ಎಂ.ಬಿ. ನಗರ ‍ಪೊಲೀಸ್ ಠಾಣೆಯ ಸೆಲ್‌ನಲ್ಲಿ ಇಡಲಾಗಿತ್ತು. ಸೆಲ್‌ನಲ್ಲಿ ರುದ್ರಗೌಡ ಕುರ್ಚಿ ಹಾಕಿಕೊಂಡು ಕುಳಿತಿರುವ ಹಾಗೂ ಇನ್ನೊಬ್ಬ ಆರೋಪಿ ಮಲ್ಲಿಕಾರ್ಜುನ ಕೈಕಟ್ಟಿಕೊಂಡು ನಿಂತಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತು. 

ಪುಕ್ಕಟ್ಟೆ ಪ್ರಚಾರ ಕೊಡ್ತಿದ್ದೀರಿ…: ರುದ್ರಗೌಡ ಡಿ. ಪಾಟೀಲ ಅವರ ಅಣ್ಣ, ಸಿಐಡಿ ಕಸ್ಟಡಿಯಲ್ಲಿರುವ ಪ್ರಕರಣದ ಮತ್ತೊಬ್ಬ ಆರೋಪಿ ಮಹಾಂತೇಶ ಪಾಟೀಲ ಸೋಮವಾರ ಮಾಧ್ಯಮದವರನ್ನು ನೋಡುತ್ತಿದ್ದಂತೆಯೇ, ‘ಹಾಕ್ರಿ ಹಾಕ್ರಿ… ಚಂದ್‌ ಹಾಕ್ರಿ. ರೊಕ್ಕ ಕೊಟ್ಟರೂ ಟಿ.ವಿ.ನ್ಯಾಗ್‌ ಅಡ್ವರ್ಟೈಸ್‌ ಬರೂದಿಲ್ಲ. ಈಗ ಪುಕ್ಕಟ್ಟೆ ಬರ್ತದ. ಬರ್ಲಿ ಬರ್ಲಿ ಚಂದ್‌ ಬರ್ಲಿ…’ ಎಂದು ಹೇಳಿದರು. ಅಷ್ಟರಲ್ಲೇ ಅಧಿಕಾರಿಗಳು ಅವರನ್ನು ಮುಂದಕ್ಕೆ ಕರೆದೊಯ್ದರು.

Leave a Reply

Your email address will not be published. Required fields are marked *

error: Content is protected !!