ರೂ.3.36 ಲಕ್ಷ ಕೋಟಿಗೆ ಟ್ವಿಟರ್ ಖರೀದಿಸಿದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್
ಟೆಸ್ಲಾ ಖ್ಯಾತಿಯ ಉದ್ಯಮಿ ಎಲಾನ್ ಮಸ್ಕ್, ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು ಖರೀದಿಸಿದ್ದಾರೆ. 44 ಬಿಲಿಯನ್ ಡಾಲರ್ (ಸುಮಾರು ₹3.36 ಲಕ್ಷ ಕೋಟಿ)ಗೆ ಎಲಾನ್ ಮಸ್ಕ್ ಅವರು ಟ್ವಿಟರ್ ಕಂಪನಿಯ ಪೂರ್ತಿ ಷೇರು ತನ್ನದಾಗಿಸಿಕೊಂಡಿದ್ದಾರೆ.
ಟ್ವಿಟರ್‌ನ ಪ್ರತಿ ಷೇರಿಗೆ 54.20 ಡಾಲರ್ ನೀಡಿ ಪೂರ್ತಿ ಷೇರು ಖರೀದಿಸುವ ಎಲಾನ್ ಮಸ್ಕ್ ಪ್ರಸ್ತಾಪವನ್ನು ಟ್ವಿಟರ್ ಆಡಳಿತ ಮಂಡಳಿ ಒಪ್ಪಿದ್ದು, ಅದರಂತೆ ಹಲವು ದಿನಗಳಿಂದ ನಡೆಯುತ್ತಿದ್ದ ವ್ಯಾಪಾರ ಒಪ್ಪಂದಕ್ಕೆ ಅಂತಿಮ ಮುದ್ರೆ ಬಿದ್ದಿದೆ. ಎಲಾನ್ ಮಸ್ಕ್ ಅವರು ಟ್ವಿಟರ್‌ನಲ್ಲಿ ಶೇ 9.2ರಷ್ಟು ಷೇರು ಪಾಲು ಹೊಂದಿದ್ದರು. ನಂತರದಲ್ಲಿ ಪ್ರತಿ ಷೇರಿಗೆ 54.20 ಡಾಲರ್(₹4149) ನಂತೆ ಪಾವತಿಸಿ, ಪೂರ್ತಿ ಪಾಲು ಖರೀದಿಗೆ ಇಂಗಿತ ವ್ಯಕ್ತಪಡಿಸಿದ್ದರು.
ಟ್ವಿಟರ್ ಖರೀದಿ ಪ್ರಸ್ತಾಪಕ್ಕೆ ಮಂಡಳಿ ಸಮ್ಮತಿ ಸೂಚಿಸುವುದರೊಂದಿಗೆ, ಕಂಪನಿ ಪೂರ್ತಿಯಾಗಿ ಎಲಾನ್ ಮಸ್ಕ್ ಪಾಲಾಗಿದೆ. 2013ರಿಂದ ಟ್ವಿಟರ್ ಸಾರ್ವಜನಿಕ ಷೇರು ಮೂಲಕ ಹೂಡಿಕೆ ಕಂಪನಿಯಾಗಿ ಬದಲಾಗಿತ್ತು. ಆದರೆ ಈಗ ಪೂರ್ತಿ ಷೇರು ಮಾರಾಟವಾಗಿ, ಎಲಾನ್ ಮಸ್ಕ್ ತೆಕ್ಕೆಗೆ ಬಂದಿರುವುದರಿಂದ, ಮುಂದೆ ಖಾಸಗಿ ಕಂಪನಿಯಾಗಿ ಮುಂದುವರಿಯಲಿದೆ.
ಏಪ್ರಿಲ್ 14ರಂದು ಎಲಾನ್ ಮಸ್ಕ್ ಅವರು ಟ್ವಿಟರ್ ಖರೀದಿಯ ಪ್ರಸ್ತಾಪ ಮಾಡಿದ್ದರು. ಅಲ್ಲದೆ, ಅಧಿಕ ಷೇರು ಪಾಲು ಹೊಂದಿದ್ದರೂ, ಟ್ವಿಟರ್ ಮಂಡಳಿ ಸೇರುವ ಆಹ್ವಾನವನ್ನು ತಿರಸ್ಕರಿಸಿದ್ದರು. ಇದೀಗ ಪೂರ್ತಿ ಷೇರು ಖರೀದಿಸಿ, ಕಂಪನಿಯನ್ನೇ ತನ್ನದಾಗಿಸಿಕೊಳ್ಳುವ ಮೂಲಕ ಉದ್ಯಮಿ ಮಸ್ಕ್ ಮತ್ತೆ ಸುದ್ದಿಯಾಗಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರವೆನ್ನುವುದು ಪ್ರಜಾಪ್ರಭುತ್ವದಲ್ಲಿ ಮಹತ್ವದ್ದು ಮತ್ತು ಟ್ವಿಟರ್, ಇಂದಿನ ಡಿಜಿಟಲ್ ಯುಗದಲ್ಲಿ ಅದಕ್ಕೆ ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಎಲಾನ್ ಮಸ್ಕ್ ಹೇಳಿಕೆಯೊಂದನ್ನು ನೀಡಿದ್ದರು.