ಬೆಂಗಳೂರು ಪ್ರೌಢಶಾಲೆಯಲ್ಲಿ ಬೈಬಲ್ ಕಡ್ಡಾಯ ವಿವಾದ: ಶಾಲೆಗೆ ಪೊಲೀಸ್ ಭದ್ರತೆ ಹೆಚ್ಚಳ

ಬೆಂಗಳೂರು, ಎ.26: ನಗರದ ಕ್ಲಾರೆನ್ಸ್ ಪ್ರೌಢಶಾಲೆಯಲ್ಲಿ ಬೈಬಲ್ ಕಡ್ಡಾಯಗೊಳಿಸಿದ್ದಾರೆಂದು ಆರೋಪಿಸಿರುವ ವಿವಾದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ಪೊಲೀಸ್ ಭದ್ರತೆ ಹೆಚ್ಚಳ ಮಾಡಲಾಗಿದೆ.

ಶಾಲಾ ಆಡಳಿತ ಮಂಡಳಿಯ ಈ ಕ್ರಮಕ್ಕೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಶಾಲೆಗೆ ಸಂಘಟನೆಗಳು ಭೇಟಿ ನೀಡುವ ಸಾಧ್ಯತೆ ಹಿನ್ನೆಲೆಯಲ್ಲಿ ನಾಲ್ಕೂ ದ್ವಾರಗಳಲ್ಲಿ ವ್ಯಾಪಕ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಶಾಲೆಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬೈಬಲ್ ಬೋಧನೆ ಮಾಡಲಾಗುತ್ತಿದೆ ಎಂದು ಹಿಂದೂ ಜನಜಾಗೃತಿ ವೇದಿಕೆಯ ವಕ್ತಾರ ಮೋಹನ್ ಗೌಡ ಆರೋಪಿಸಿದರು. ಶಿಕ್ಷಣ ಸಂಸ್ಥೆಗಳು ಶಿಕ್ಷಣ ಮಾತ್ರ ನೀಡಬೇಕು. ಆದರೆ ಮತಾಂತರ ಮಾಡುವುದಕ್ಕಲ್ಲ. ಈ ಸಂಬಂಧ ಶಿಕ್ಣಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಮನವಿ ಮಾಡಿ ಶಾಲಾ ಆಡಳಿತ ಮಂಡಳಿ ವಿರುದ್ಧ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. 

ಬೈಬಲ್ ಕಡ್ಡಾಯಗೊಳಿಸಿ ವಿವಾದ ಉಂಟಾದ ಬೆನ್ನಲ್ಲೇ ಶಾಲೆಗೆ ಬೆಂಗಳೂರು ಉತ್ತರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಜೈಶಂಕರ್ ಭೇಟಿ ನೀಡಿ ಪರಿಶೀಲಿಸಿ ಶಾಲೆಯ ಪ್ರಾಂಶುಪಾಲರ ಜೊತೆ ಚರ್ಚೆ ನಡೆಸಿದರು. 
ಈ ಕುರಿತು ಪ್ರತಿಕ್ರಿಯಿಸಿದ ಕ್ಲಾರೆನ್ಸ್ ಪ್ರೌಢಶಾಲೆಯ ಪ್ರಾಂಶುಪಾಲ ಜೆರಿ ಜಾರ್ಜ್ ಮ್ಯಾಥ್ಯೂ ಅವರು, 100 ವರ್ಷಗಳಿಂದ ಬೈಬಲ್ ಬೋಧಿಸಲಾಗುತ್ತಿದೆ. ಕಾನೂನಿನ ಎಲ್ಲ ನಿಯಮಗಳನ್ನು ಪಾಲಿಸುತ್ತೇವೆ. ಯಾವುದೇ ಕಾರಣಕ್ಕೂ ನಿಯಮ ಮೀರುವುದಿಲ್ಲ. ಕಾನೂನಿನ ನಿಯಮಗಳ ಪ್ರಕಾರವೇ ಶಾಲೆ ನಡೆಯುತ್ತಿದೆ ಎಂದು ಹೇಳಿದ್ದಾರೆ. 

Leave a Reply

Your email address will not be published. Required fields are marked *

error: Content is protected !!