ಸಂತೋಷ್ ಪಾಟೀಲ್ ನಡೆಸಿದ ಕಾಮಗಾರಿಗಳಿಗೆ ಅನುಮೋದನೆ ಆದೇಶ- ಇಲಾಖೆ ಉಪನಿರ್ದೇಶಕರ ಸ್ಪಷ್ಟಣೆ
ಬೆಂಗಳೂರು, ಎ.26 : ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ನಡೆಸಿದ ಕಾಮಗಾರಿಗಳಿಗೆ ಸಂಬಂಧಿಸಿ ‘ಅನುಮೋದನೆಗಾಗಿ ಆದೇಶ’ ನೀಡಲಾದ ಪತ್ರಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆ ಉಪನಿರ್ದೇಶಕರು ಸ್ಪಷ್ಟಣೆ ನೀಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಗ್ರಾಮೀಣಾಭಿವೃದ್ಧಿ ಇಲಾಖೆ ಉಪನಿರ್ದೇಶಕರು, ಬೆಳಗಾವಿ ಜಿಲ್ಲೆ ಹಿಂಡಲಗಾ ತಾಲೂಕಿನ ರಸ್ತೆ ಕಾಮಗಾರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಯಾರೋ ಫೋರ್ಜರಿ ಮಾಡಿ ಉಲ್ಲೇಖಿತ ಪತ್ರದ ಮೇಲೆ ಹಸಿರು ಶಾಹಿಯಲ್ಲಿ ‘ಆದೇಶದ ಪ್ರತಿಗಳನ್ನು 2021ರ ಮಾರ್ಚ್ 5ರಂದು ನೀಡಲಾಗುವುದು’ ಎಂದು ಹಾಗೂ ಕೊನೆಯ ಪುಟದಲ್ಲಿ, ‘ಅನುಮೋದನೆಗಾಗಿ ಆದೇಶಿಸಲಾಗಿದೆ’ ಎಂದು ನಮೂದಿಸಿದ್ದು, ಈ ಕುರಿತು ತನಿಖೆ ನಡೆಸುವಂತೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಕ್ರಮ ವಹಿಸಲಾಗುತ್ತಿದೆ’ ಎಂದು ಸ್ಪಷ್ಟಣೆ ನೀಡಿದ್ದಾರೆ.
ಹಾಗೂ ಬೆಳಗಾವಿ ಜಿ.ಪಂ. ಹಿಂದಿನ ಅಧ್ಯಕ್ಷೆ ಆಶಾ ಪ್ರಶಾಂತರಾವ್ ಐಹೊಳೆ ಅವರು ನೀಡಿರುವ ಪತ್ರವನ್ನು ಉಲ್ಲೇಖಿಸಿ ಸದರಿ ಪತ್ರದ ಮೇಲೆ ಹಸಿರು ಶಾಹಿಯಲ್ಲಿ ‘ಆದೇಶದ ಪ್ರತಿಗಳನ್ನು 2021ರ ಮಾರ್ಚ್ 5ರಂದು ನೀಡಲಾಗುವುದು’ ಎಂದು ಹಾಗೂ ಕೊನೆಯ ಪುಟದಲ್ಲಿ ‘ಅನುಮೋದನೆಗಾಗಿ ಆದೇಶಿಸಲಾಗಿದೆ’ ಎಂದು ನಮೂದಿಸಿದೆ. ಆದರೆ, ಉಲ್ಲೇಖಿತ ಪತ್ರದ ಮೇಲೆ ಹಸಿರು ಶಾಹಿಯಲ್ಲಿ ನಮೂದಿಸಿರುವುದು ಈ ಕಚೇರಿಯಿಂದ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿಯಾಗಲಿ ಬರೆದಿರುವುದಾಗಿರುವುದಿಲ್ಲ’ ಎಂದು ತಿಳಿಸಲಾಗಿದೆ.
‘ವಾಸ್ತವವಾಗಿ ಇಲಾಖೆಯಲ್ಲಿ ಸ್ವೀಕೃತಿಗೊಂಡ ಪತ್ರಗಳ ಮೇಲೆ ಮೊಹರು ಹಾಕಿರುವ ಪತ್ರಗಳು ಅರ್ಜಿದಾರರ ಪ್ರತಿಯಾಗಿದ್ದು, ಇದರ ಮೇಲೆ ಕಚೇರಿಯ ಟಿಪ್ಪಣಿ/ಷರಾಗಳಾಗಲೀ ನಮೂದಿಸುವುದಿಲ್ಲ. ಹಸಿರು ಶಾಹಿಯಲ್ಲಿ ನಮೂದಿಸಿರುವ ಷರಾ ಫೋರ್ಜರಿಯಾಗಿರುತ್ತದೆ. ಈ ರೀತಿ ಷರಾ ಮೂಲಕ ಅನುಮೋದನೆ ಆದೇಶ ನೀಡುವುದು ನಿಯಮ ಬಾಹಿರ. ಸರಕಾರದಲ್ಲಿ ಸ್ವೀಕೃತಗೊಂಡ ಪ್ರಸ್ತಾವನೆಗಳನ್ನು ಕ್ರೂಢಿಕರಿಸಿ ಅನುದಾನ ಲಭ್ಯತೆಯ ಆಧಾರದ ಮೇಲೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಂಡು ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿ ಸರಕಾರಿ ಆದೇಶ ಹೊರಡಿಸಲಾಗುತ್ತದೆ. ಈ ಅರ್ಜಿಯು, ಸ್ವೀಕೃತವಾಗಿದ್ದರೂ ಅನುದಾನದ ಕೊರತೆಯಿಂದ ಇದನ್ನು ಪರಿಗಣಿಸದೆ ವಿಲೇ ಇಡಲಾಗಿದೆ’ ಎಂದು ಸ್ಪಷ್ಟಣೆ ನೀಡಲಾಗಿದೆ ಎಂದು ತಿಳಿದು ಬಂದಿದೆ.