ಬೈಂದೂರು: ಶ್ಯಾಮಿಯಾನ ಹಾಕುತ್ತಿದ್ದಾಗ ವಿದ್ಯುತ್ ತಗುಲಿ ಬಾಲಕ ಮೃತ್ಯು
ಉಡುಪಿ: ಹೋಸ್ಕೋಟೆಯಲ್ಲಿ ಶ್ಯಾಮಿಯಾನ ಹಾಕುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಬಾಲಕನೋರ್ವ ಮೃತಪಟ್ಟ ಘಟನೆ ನಡೆದಿದೆ.
ಇಲ್ಲಿನ ವಸಂತಿ ಎಂಬವರ ಮಗ 16 ವರ್ಷದ ಚೇತನ ಮೃತಪಟ್ಟ ಬಾಲಕ. ಪ್ರಥಮ ಪಿಯುಸಿ ವಿದ್ಯಾಬ್ಯಾಸ ಮಾಡುತ್ತಿದ್ದ ಚೇತನ ಕಾಲೇಜಿಗೆ ರಜೆ ಇದ್ದುದ್ದರಿಂದ ಎ.24 ರಂದು ಬೆಳಿಗ್ಗೆ ಹೋಸ್ಕೋಟೆಯ ನಾಗರಾಜ ಭಂಡಾರಿಯವರ ಶ್ಯಾಮಿಯಾನ ಕೆಲಸಕ್ಕೆ ಹೋಗಿದ್ದರು. ರಾತ್ರಿ 10:30 ರ ವೇಳೆಗೆ ನಾಯ್ಕನ ಕಟ್ಟೆಯ ಅಶೋಕ ಭಟ್ ರವರ ಮನೆಯಲ್ಲಿ ಉಪನಯನ ಕಾರ್ಯಕ್ರಮಕ್ಕಾಗಿ ಕಬ್ಬಿಣದ ಏಣಿಯ ಮೇಲೆ ನಿಂತು ಶ್ಯಾಮಿಯಾನವನ್ನು ಕಟ್ಟುತ್ತಿರುವಾಗ ಶ್ಯಾಮಿಯಾನ್ ನ ಸುತ್ತ ಅಳವಡಿಸಿದ ಲೈಟಿಂಗ್ ನ ವಯರ್ ಗೆ ಅಳವಡಿಸಿದ ಗುಂಡು ಪಿನ್ನು ಆಕಸ್ಮಿಕವಾಗಿ ಚೇತನ್ ಅವರಿಗೆ ತಾಗಿ ವಿದ್ಯುತ್ ಸ್ಪರ್ಶವಾಗಿ ಅಸ್ವಸ್ಥಗೊಂಡಿದ್ದರು.
ಈ ವೇಳೆ ಚಿಕಿತ್ಸೆಗಾಗಿ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಅಣ್ಣಪ್ಪ ಶೆಟ್ಟಿ ಎಂಬವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.