ಗೃಹಪ್ರವೇಶವಾಗಿ ಎರಡೇ ದಿನದಲ್ಲಿ ನಡೆಯಿತು ಘನಘೋರ ದುರಂತ!
ಕೇರಳ ಎ.25: ಮನೆಯ ಗೃಹಪ್ರವೇಶವಾಗಿ ಎರಡೇ ದಿನಗಳಲ್ಲಿ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಕನಸಿನ ಮನೆಯಲ್ಲಿ ದಂಪತಿಗಳಿಬ್ಬರು ಸುಟ್ಟು ಕರಕಲಾದ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಪುಟ್ಟಡಿ ಎಂಬಲ್ಲಿ ನಡೆದಿದೆ.
ರವೀಂದ್ರನ್ (50) ಮತ್ತು ಉಷಾ (45) ಮೃತ ದಂಪತಿಗಳು. ಬೆಂಕಿ ಅವಘಡದಲ್ಲಿ ದಂಪತಿಯ ಪುತ್ರಿ ಶ್ರೀಧನ್ಯಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆರ್ಥಿಕ ನೆರವು ನೀಡುವ ಲೈಫ್ ಯೋಜನೆಯಡಿ ಸರ್ಕಾರ ನೀಡಿದ್ದ ಹಣವನ್ನು ಪಡೆದುಕೊಂಡು ರವೀಂದ್ರನ್ ಮತ್ತು ಉಷಾ ದಂಪತಿ ಮನೆ ನಿರ್ಮಿಸಿಕೊಂಡಿದ್ದರು. ಎರಡು ದಿನಗಳ ಹಿಂದೆಯಷ್ಟೇ ಗೃಹಪ್ರವೇಶ ಕಾರ್ಯಕ್ರಮ ನಡೆಸಿ ಹೊಸ ಮನೆಗೆ ಹೆಜ್ಜೆ ಇಟ್ಟಿದ್ದರು. ಆದರೆ ಭಾನುವಾರ ಬೆಳಗಿನ ಜಾವ 2ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಶ್ರೀಧನ್ಯ ಮನೆಯಿಂದ ಹೊರಬಂದು ಸಹಾಯಕ್ಕಾಗಿ ಕೂಗಿದಾಗ ಸ್ಥಳೀಯರು ಆಗಮಿಸಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಅಗ್ನಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಅಗ್ನಿಶಾಮಕ ದಳ, ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ದಂಪತಿ ಬೆಂಕಿಗೆ ಆಹುತಿಯಾಗಿದ್ದರು. ತೀವ್ರ ಸುಟ್ಟ ಗಾಯಗಳೊಂದಿಗೆ ಬಳಲುತ್ತಿದ್ದ ಶ್ರೀಧನ್ಯಾಳನ್ನು ಇಡುಕ್ಕಿಯ ಕಟ್ಟಪ್ಪನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.