ಉಡುಪಿ ಸಹಿತ ಆರು ಜಿಲ್ಲೆಯ ಕುಡಿಯುವ ನೀರಿನ ಯೋಜನೆಯಡಿ ಸಾವಿರಾರು ಕೋಟಿಯ ಅಕ್ರಮ?

ಬೆಂಗಳೂರು ಎ.25: ಮಾಜಿ ಸಚಿವ ಈಶ್ವರಪ್ಪ ಅವರ ವಿರುದ್ಧದ 40 ಪರ್ಸೆಂಟ್ ಕಮಿಷನ್ ಆರೋಪದ ಬಳಿಕ, ಇತ್ತೀಚೆಗೆ ಅಭಿವೃದ್ಧಿ ಯೋಜನೆಯ ಕಾಮಗಾರಿಗಳಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಬಗ್ಗೆ ಹೆಚ್ಚು ಆರೋಪಗಳು ಕೇಳಿ ಬರುತ್ತಿದೆ.

ಇದೀಗ ಜಲಜೀವನ್ ಮಿಷನ್ ಮತ್ತು ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿಯಲ್ಲಿ ಒಟ್ಟು 6,500 ಕೋಟಿ ರೂ. ಮೊತ್ತದ ಕಾಮಗಾರಿ ಟೆಂಡರ್‌ನಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪ ಕೇಳಿ ಬಂದಿದೆ. 40 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪಕ್ಕೆ ಗುರಿಯಾಗಿರುವ ಕೆ.ಎಸ್.ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ಈ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಇದರಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆಗಳಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಈ ವರದಿಯ ಪ್ರಕಾರ, 6,500 ಕೋಟಿ ರೂ. ಮೊತ್ತದ ಕಾಮಗಾರಿ ಟೆಂಡರ್‌ನಲ್ಲಿನ ಅಕ್ರಮಗಳು ಅಲ್ಲದೆ 50.00 ಕೋಟಿ ರೂ. ಮೊತ್ತ ಮೀರಿದ ಕಾಮಗಾರಿಗಳ ಟೆಂಡರ್‌ನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಟೆಂಡರ್ ಪರಿಶೀಲನಾ ಸಮಿತಿಯ ಪರಿಶೀಲನೆ ವ್ಯಾಪ್ತಿಗೆ ಒಳಪಡಬೇಕು ಎಂದು ಆರ್ಥಿಕ ಇಲಾಖೆಯು 2021ರ ಡಿಸೆಂಬರ್ 21ರಂದು ಹೊರಡಿಸಿದ್ದ ಸುತ್ತೋಲೆಯ ಉಲ್ಲಂಘನೆಯಾಗಿದೆ ಎಂಬ ಆಪಾದನೆ ಕೇಳಿ ಬಂದಿದೆ.

ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ, ಶಿವಮೊಗ್ಗ ನಗರ ಮತ್ತು ಗೋಪಿಶೆಟ್ಟಿಕೊಪ್ಪ, ಯಾದಗಿರಿ, ರಾಯಚೂರು ಜಿಲ್ಲೆಯ ನಾರಾಯಣಪುರ ಜಲಾಶಯ ವ್ಯಾಪ್ತಿಯಲ್ಲಿನ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಮತ್ತು ಬಹುಗ್ರಾಮ ಕುಡಿಯುವ ನೀರು ಯೋಜನೆಗೆ 6,500 ಕೋಟಿ ರೂ. ಮೊತ್ತದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ 2022ರ ಎಪ್ರಿಲ್ 5 ಮ್ತು 8ರಂದು ಟೆಂಡರ್ ಆಹ್ವಾನಿಸಿತ್ತು. ಈ ಟೆಂಡರ್‌ನಲ್ಲಿ ನಿರ್ದಿಷ್ಟ ಗುತ್ತಿಗೆದಾರರು ಮತ್ತು ಕಂಪೆನಿಗಳಷ್ಟೇ ಭಾಗವಹಿಸಲು ಅನುಕೂಲ ಮಾಡಿಕೊಟ್ಟಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಕೆಟಿಪಿಪಿ ಕಾಯ್ದೆ 5ನೇ ಅಧ್ಯಾಯದ ಪ್ರಕಾರ 2 ಕೋಟಿ ರೂ. ಮೊತ್ತಕ್ಕೂ ಮೀರಿದ ಕಾಮಗಾರಿಗಳ ಟೆಂಡರ್‌ನಲ್ಲಿ ಬಿಡ್ ಮಾಡಲು ಮತ್ತು ಟೆಂಡರ್‌ಗೆ ಲಗತ್ತಿಸಬೇಕಾದ ದಾಖಲೆಗಳನ್ನು ಒದಗಿಸಲು ಕನಿಷ್ಠ 30 ದಿನಗಳ ಕಾಲಾವಕಾಶ ನೀಡಬೇಕು. ಆದರೆ ಇಲಾಖೆಯು ತರಾತುರಿಯಲ್ಲಿ ಟೆಂಡರ್ ಆಹ್ವಾನಿಸಿ ಕೇವಲ 5-8 ದಿನಗಳ ಕಾಲಾವಕಾಶ ಮಾತ್ರ ನೀಡಿದೆ ಎಂಬ ಆಪಾದನೆ ಕೇಳಿ ಬಂದಿದೆ.
ಅಲ್ಲದೆ ಕಾಮಗಾರಿ ವಿನ್ಯಾಸ ಮತ್ತು ಈ ಸಂಬಂಧದ ವರದಿಯನ್ನು 5-8 ದಿನದಲ್ಲಿ ಸಿದ್ಧಪಡಿಸಲು ಗುತ್ತಿಗೆದಾರರಿಗೆ ಅಸಾಧ್ಯವಾಗಿದೆ. ಇದೊಂದು ಸಿವಿಲ್ ಕಾಮಗಾರಿಯಾಗಿದ್ದು, ಇದನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಕನಿಷ್ಠ 30 ತಿಂಗಳು ಬೇಕಾಗಲಿದೆ. ಹೀಗಾಗಿ ವರದಿ ಸಿದ್ಧಪಡಿಸಲು ಕಾಲಾವಕಾಶ ಬೇಕಿದೆ. ಆದರೆ 5-8 ದಿನಗಳು ಮಾತ್ರ ಕಾಲಾವಕಾಶ ನೀಡುವ ಮೂಲಕ ಆಯ್ದ ಮತ್ತು ನಿರ್ದಿಷ್ಟ ಗುತ್ತಿಗೆದಾರರು, ಕಂಪೆನಿಗಳು ಮಾತ್ರ ಭಾಗವಹಿಸಲು ಅವಕಾಶ ನೀಡಿರುವುದರ ಹಿಂದೆ ದೊಡ್ಡಮಟ್ಟದ ಕಮಿಷನ್ ವ್ಯವಹಾರ ನಡೆದಿದೆ ಎಂದು ಕೆಲ ಗುತ್ತಿಗೆದಾರರು ತಿಳಿಸಿರುವುದಾಗಿ ಮಾಧ್ಯಮ ವರದಿಯಲ್ಲಿ ತಿಳಿಸಲಾಗಿದೆ. ಇನ್ನು, ಅನರ್ಹ ಗುತ್ತಿಗೆದಾರರು, ಕಂಪೆನಿಗಳೂ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಕೂಲ ಮಾಡಿಕೊಡಲಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಕಾಮಗಾರಿ ನಿರ್ವಹಿಸಲು ಜಂಟಿ ಸಹಭಾಗಿತ್ವದಡಿಯಲ್ಲಿ ಶೇ.25ರಷ್ಟು ಕಾಮಗಾರಿ ನಡೆಸಿ ಪ್ರಗತಿ ಸಾಧಿಸಿರಬೇಕು. ಅಲ್ಲದೆ ಹಣಕಾಸು ಮತ್ತು ತಾಂತ್ರಿಕ ಸಾಮರ್ಥ್ಯ ಹೊಂದಿರಬೇಕು. ನಿಗದಿತ ಕಾಲಾವಧಿ ಮತ್ತು ಗುರಿಯೊಳಗೆ ಕಾಮಗಾರಿ ನಿರ್ವಹಿಸಿರುವ ಅನುಭವ ಇರಬೇಕು. ಆದರೆ ಟೆಂಡರ್‌ನಲ್ಲಿ ಈಗ ಬಿಡ್ ಮಾಡಿರುವ ಕಂಪೆನಿ, ಗುತ್ತಿಗೆದಾರರ ಪೈಕಿ ಬಹುತೇಕರಿಗೆ ಅನುಭವ, ಅರ್ಹತೆ, ತಾಂತ್ರಿಕ ಮತ್ತು ಹಣಕಾಸು ಸಾಮರ್ಥ್ಯವೇ ಇಲ್ಲ ಎಂದು ಗೊತ್ತಾಗಿದೆ.

ಜಲಜೀವನ್ ಮಿಷನ್, ಬಹು ಗ್ರಾಮ ಕುಡಿಯುವ ನೀರು ಸರಬರಾಜು ಕಾಮಗಾರಿ ಟೆಂಡರ್‌ನಲ್ಲಿ ವಿಧಿಸಿರುವ ನಿಯಮಗಳ ಪ್ರಕಾರ ಯಾರು ಬೇಕಾದರೂ ಬಿಡ್ ಮಾಡಲು ಅವಕಾಶ ಕಲ್ಪಿಸಿರುವುದು ಅಕ್ರಮಕ್ಕೆ ದಾರಿಮಾಡಿ ಕೊಡಲಾಗಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಟೆಂಡರನ್ನು ರದ್ದುಗೊಳಿಸಬೇಕು. ಜಂಟಿ ಸಹಭಾಗಿತ್ವದಡಿಯಲ್ಲಿ ಭಾಗವಹಿಸಿರುವ ಕಂಪೆನಿ, ಗುತ್ತಿಗೆದಾರರಿಗೆ ತಾಂತ್ರಿಕ, ಅನುಭವ ಹೊಂದಿರಬೇಕು ಎಂಬ ಷರತ್ತು ವಿಧಿಸಬೇಕು. 2021ರ ಡಿಸೆಂಬರ್21ರಂದು ಆರ್ಥಿಕ ಇಲಾಖೆ ಹೊರಡಿಸಿರುವ ಸುತ್ತೋಲೆ ಪ್ರಕಾರ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಟೆಂಡರ್ ಪರಿಶೀಲನಾ ಸಮಿತಿಯು ಪರಿಶೀಲಿಸಬೇಕು. ಬಿಡ್ ಮಾಡಲು ಕನಿಷ್ಠ 30 ದಿನಗಳ ಕಾಲಾವಕಾಶ ನೀಡಬೇಕು. ಅಲ್ಲದೆ ಈ ಅಕ್ರಮದಲ್ಲಿ ಭಾಗಿಯಾಗಿರುವ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಸಾರ್ವಜನಿಕರ ಹಣವನ್ನು ರಕ್ಷಿಸಬೇಕು ಎಂಬುದಾಗಿ ಗುತ್ತಿಗೆದಾರರೊಬ್ಬರು ತಿಳಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!