ಅಕ್ಷಯ ತೃತೀಯಾಕ್ಕೆ ಹಿಂದೂಗಳ ಅಂಗಡಿಯಿಂದಲೇ ಚಿನ್ನ ಖರೀದಿಸಿ- ಪ್ರಮೋದ್ ಮುತಾಲಿಕ್ ಕರೆ

ಕುಂದಾಪುರ: ಅಕ್ಷಯ ತೃತೀಯಕ್ಕೆ ಹಿಂದೂಗಳ ಅಂಗಡಿಯಿಂದ ಚಿನ್ನ ಖರೀದಿಸಿ ಎಂದು ಶ್ರೀ ರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.

ಕುಂದಾಪುರದಲ್ಲಿ ಮಾಧ್ಯಮದೊಂದಿಗೆ ಸೋಮವಾರ ಮಾತನಾಡಿದ ಅವರು, ಹಿಂದೂಗಳು ಅಕ್ಷಯ ತೃತೀಯಾಕ್ಕೆ ಹಿಂದೂಗಳ ಅಂಗಡಿಯಿಂದಲೇ ಚಿನ್ನ ಖರೀದಿಸಬೇಕು. ಈ ಸಂಘರ್ಷ ನಿರಂತರ ಮುಂದುವರೆಯಲಿದೆ. ಸಮಾಜಕ್ಕೆ, ಜನರಿಗೆ, ದೇಶಕ್ಕೆ ಯಾವುದು ಹಿತ, ಯಾವುದು ಮಾರಕ ಎನ್ನುವುದು ಗೊತ್ತಾಗಿದೆ ಎಂದರು. ಹಿಂದೂ ಸಂಘಟನೆ ಗಳಿಂದ ಸಮಾಜ ಜಾಗೃತಿಯಾಗಿದೆ. ಸಮಾಜಕ್ಕೊಂದು ಕಲ್ಪನೆ, ದೃಷ್ಟಿಕೋನ ಸಿಕ್ಕಿದೆ. ಅಕ್ಷಯ ತೃತೀಯದಂದು ಹಿಂದೂಗಳ ಅಂಗಡಿಯಲ್ಲೇ ಖರೀದಿ ಮಾಡಬೇಕೆನ್ನುವುದು ಜನರಿಗೂ ಅನ್ನಿಸಿದೆ. ಅಕ್ಷಯ ತೃತೀಯ ಹಿಂದುಗಳ ಹಬ್ಬ. ಹಿಂದುಗಳ ಹಬ್ಬದಂದು ಹಿಂದುಗಳ ಅಂಗಡಿಯಲ್ಲಿ ಖರೀದಿ ಮಾಡಿದರೆ ಸಂಸ್ಕೃತಿ ಉಳಿಯುತ್ತದೆ. ಹಿಂದೂಸ್ತಾನದ ಸುರಕ್ಷತೆಗೆ ಇದು ಅಗತ್ಯ. ಜನರು ಕೂಡ ಇದಕ್ಕೆ ಸ್ಪಂದಿಸುತ್ತಿದ್ದಾರೆ ಎಂದು ಮುತಾಲಿಕ್ ತಿಳಿಸಿದರು.

ಹಲಾಲ್ ಬಗ್ಗೆ ಆಗಿರುವ ಜಾಗೃತಿಯನ್ನು ನಾವು ನೋಡಿದ್ದೇವೆ. ಮುಂದಿನ ದಿನ ಹಲಾಲ್ ಕಟ್ ಮಾಂಸ ಸಂಪೂರ್ಣವಾಗಿ ಹಿಂದೂಗಳು ಖರೀದಿ ಮಾಡುವುದಿಲ್ಲ. ಇದೇ ಮಾದರಿಯ ಹೋರಾಟ ಈ ವಿಚಾರದಲ್ಲೂ ನಡೆಯಲಿದೆ ಎಂದ ಅವರು, ಕೇರಳ ಮೂಲದ ಜ್ಯುವೆಲ್ಲರಿ ಕಂಪನಿಗಳು ಹಿಂಸೆಗೆ ಹಣಕಾಸು ನೆರವು ನೀಡುತ್ತಿವೆ. ಪರೋಕ್ಷವಾಗಿ ದೇಶದ್ರೋಹಿ ಸಂಘಟನೆಗಳಿಗೆ ಸಹಕಾರ ಕೊಡುತ್ತಿದ್ದಾರೆ. ಕೇರಳದಲ್ಲಿ 800ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಈ ರೀತಿ ಬರ್ಬರ ಕೊಲೆಗಳಿಗೆ ಹಣಕಾಸು ನೆರವು ನೀಡಿದ್ದಾರೆ. ಕೇರಳದಲ್ಲಿ ನಡೆದಿರುವುದು ಸ್ವಾರ್ಥದ ಕೊಲೆಯಲ್ಲ, ಸಿದ್ಧಾಂತಕ್ಕಾಗಿ ನಡೆದ ಕೊಲೆ. ಹಿಂದುತ್ವದ ಕಾರಣಕ್ಕೆ ಕೊಲೆ ಮಾಡಿದ್ದಾರೆ. ಚಿನ್ನದ ವ್ಯಾಪಾರಸ್ಥರು ಇದಕ್ಕೆ ಹಣ ಹೂಡಿದ್ದಾರೆ ಎಂದರು.ಇವರ ಜಾಹೀರಾತುಗಳಲ್ಲಿ ಮುಸ್ಲಿಂ ಮಹಿಳೆಯರನ್ನೇ ತೋರಿಸುತ್ತಾರೆ. ಹಣೆಯಲ್ಲಿ ಕುಂಕುಮ ಇಲ್ಲದವರನ್ನು ತೋರಿಸುತ್ತಾರೆ. ಹಣೆ ಮೇಲೆ ಕುಂಕುಮ ಇಟ್ಟವರನ್ನು, ಹಿಂದೂ ಸ್ತ್ರೀಯರನ್ನು ತೋರಿಸುವುದಿಲ್ಲ. ನಮ್ಮ ಸಂಸ್ಕೃತಿಯ ಅವಹೇಳನ ಮಾಡುತ್ತಿದ್ದಾರೆ. ನಮ್ಮ ಹಣಬೇಕು, ಸಂಸ್ಕೃತಿ ಬೇಡ ಎನ್ನುತ್ತಾರೆ ಎಂದವರು ಆಪಾದಿಸಿದರು.

ಮುತಾಲಿಕರಿಗೆ ವಿಮಾನ ಟಿಕೆಟ್ ಕೊಡುತ್ತೇವೆ, ಕೇರಳದಲ್ಲಿ ಹೋರಾಟ ಮಾಡಲಿ ಎಂದ ಮುಸ್ಲಿಂ ನಾಯಕರ ಹೇಳಿಕೆಗೆ ಸಿಡಿಮಿಡಿಗೊಂಡ ಪ್ರಮೋದ್ ಮುತಾಲಿಕ್, ಮಂಗಳೂರಿನಲ್ಲಿ ಕೇರಳದ ಕಡೆಯವರಿಂದ ಸಮಸ್ಯೆ ಯಾಗುತ್ತಿದೆ. ಕೇರಳದಿಂದ ತರಬೇತಿ ಪಡೆದು ಲವ್ ಜಿಹಾದ್ ಮಾಡುತ್ತಿದ್ದಾರೆ. ನಾನು ದೇಶದ ಯಾವುದೇ ಮೂಲೆಯಲ್ಲಿ ಬೇಕಾದರೂ ಹೋರಾಟ ಮಾಡುತ್ತೇನೆ. ನನ್ನನ್ನು ತಡೆಯಲು ನೀವು ಯಾರು? ನಿಮಗೇನು ಹಕ್ಕಿದೆ ಎಂದು ಪ್ರಶ್ನಿಸಿದರು. ನಾನು ಈ ದೇಶದ ನಾಗರಿಕ ಸಂವಿಧಾನಬದ್ಧ ಅಧಿಕಾರದಲ್ಲಿ ಹೋರಾಟ ಮಾಡುತ್ತೇನೆ. ನನ್ನನ್ನು ಕೇರಳಕ್ಕೆ ಹೋಗು, ಪಾಕಿಸ್ತಾನಕ್ಕೆ ಹೋಗು ಅನ್ನಲು ನೀವು ಯಾರು?ನಿಮಗೆ ಬೇಕಾದರೆ ನೀವು ಹೋಗಿ. ಕೇರಳಕ್ಕೂ ಹೋಗುತ್ತೇನೆ ಅಲ್ಲೂ ಹೊರಟ ಮಾಡುತ್ತೇನೆ. ಕೇರಳದಲ್ಲೂ ಶ್ರೀರಾಮಸೇನೆ ಸಂಘಟನೆ ಇದೆ. ಹೋರಾಟ ಮಾಡುತ್ತೇವೆ. ನಿಮ್ಮ ಯಾರ ಉಪದೇಶವು ನನಗೆ ಬೇಕಾಗಿಲ್ಲ ಎಂದು ಉತ್ತರಿಸಿದರು.

ಧರ್ಮ ಸಂಘರ್ಷ ರಾಜಕೀಯ ಲೆಕ್ಕಾಚಾರ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನಂತೂ 67 ವರ್ಷದಿಂದ ಹಿಂದೂ ಸಂಘಟನೆಗಳಲ್ಲಿ ಹೋರಾಟ ಮಾಡುತ್ತಿದ್ದೇನೆ. ನಮ್ಮ ಎಲ್ಲ ಹೋರಾಟದ ಲಾಭ ಬಿಜೆಪಿಗೆ ಹೋಗುತ್ತಿದೆ ಎನ್ನುವುದು ಗೊತ್ತಿದೆ. ಆದರೆ ಬಿಜೆಪಿಯವರ ಸ್ಪಂದಿಸುತ್ತಿಲ್ಲ. ನನ್ನ ಕಾರ್ಯಕ್ರಮಕ್ಕೆ ಬಿಜೆಪಿಯವರೇ ಅಡ್ಡಿಪಡಿಸುತ್ತಿದ್ದಾರೆ. ಕೋಲಾರ ,ಉಡುಪಿ, ಕಲಬುರ್ಗಿ ಜಿಲ್ಲೆಗೆ ನನಗೆ ಬ್ಯಾನ್ ಮಾಡಿದರು.ಕಾಂಗ್ರೆಸ್ ಇದ್ದಾಗಲೂ ಬ್ಯಾನ್, ಜೈಲು, ಬಿಜೆಪಿ ಇದ್ದಾಗಲೂ ಬ್ಯಾನ್ ಕೇಸು ಜೈಲು ಆಗುತ್ತಿದೆ. ಆದರೆ ಅವರು ಬ್ಯಾನ್ ಮಾಡುತ್ತಿರುವುದು ನನ್ನನ್ನಲ್ಲ ಹಿಂದುತ್ವವನ್ನು ಎಂದು ಗುಡುಗಿದರು.ಹಿಂದೂ ಸಿದ್ಧಾಂತವನ್ನು ಬ್ಯಾನ್ ಮಾಡುತ್ತಿದ್ದೀರಿ. ಹಿಂದುಗಳಿಂದಲೇ ಗೆದ್ದು ಬಂದವರು ನೀವು. ಮುಂದಿನ ದಿನ ನಿಮಗೆ ಪಾಠ ಕಲಿಸಬೇಕಾಗುತ್ತದೆ. ದೇಶದ ಹಿತಕ್ಕಾಗಿ ಹಿಂದೂ ಸಂಘಟಕರು ಕೆಲಸ ಮಾಡುತ್ತಿದ್ದಾರೆ ಎಂದರು.

ಬೆಂಗಳೂರಿನ ಕ್ರಿಶ್ಚಿಯನ್ ಶಾಲೆಯಲ್ಲಿ ಬೈಬಲ್ ಕಡ್ಡಾಯ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಬೈಬಲ್ ಕಡ್ಡಾಯ ಮಾಡಿರುವುದು ಖಂಡನೀಯ. ಪ್ರವೇಶಾತಿ ವೇಳೆಯಲ್ಲೇ ಬೈಬಲ್ ಕಡ್ಡಾಯ ಎಂದು ಹೇಳಿದ್ದಾರೆ. ಇದು ಕಾನೂನು ಬಾಹಿರ ಕೃತ್ಯ. ಮಕ್ಕಳಿಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇದೆ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ತತ್‌ಕ್ಷಣ ಈ ಶಾಲೆಯ ಮಾನ್ಯತೆ ರದ್ದು ಮಾಡಿ ಸೀಸ್ ಮಾಡಬೇಕು ಎಂದು ಶಿಕ್ಷಣ ಸಚಿವರನ್ನು ಮುತಾಲಿಕ್ ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!