ಕೋವಿಡ್-19 ನಾಲ್ಕನೇ ಅಲೆ: ಭಯ ಬೇಡ ಎಚ್ಚರ ವಹಿಸಿ- ಡಾ.ದೇವಿಪ್ರಸಾದ್ ಶೆಟ್ಟಿ
ಬೆಂಗಳೂರು: ದೇಶದ ವಿವಿಧ ಭಾಗಗಳಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗುತ್ತಿದ್ದು, ಇದು ಕೊರೋನಾ 4ನೇ ಅಲೆಗೆ ಆರಂಭವೇ ಎಂಬ ಆತಂಕದ ಕುರಿತು ಖ್ಯಾತ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ ದೇವಿ ಪ್ರಸಾದ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ಹೊಸ ಕೋವಿಡ್ -19 ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದು ಸಾಂಕ್ರಾಮಿಕ ರೋಗದ ನಾಲ್ಕನೇ ಅಲೆಯ ಬಗ್ಗೆ ಆತಂಕ ಮೂಡಿಸಿರುವಂತೆಯೇ ಈ ಬಗ್ಗೆ ಮಾಹಿತಿ ನೀಡಿರುವ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ.ದೇವಿ ಪ್ರಸಾದ್ ಶೆಟ್ಟಿ ಅವರು, ಭಯ ಬೇಡ ಎಚ್ಚರ ವಹಿಸಿ ಎಂದು ಸಲಹೆ ನೀಡಿದ್ದಾರೆ.
ಈ ಕುರಿತು ಸೋಮವಾರ ಮಾತನಾಡಿದ ಅವರು, ಕೋವಿಡ್-19 ನಾಲ್ಕನೇ ಅಲೆಯ ಕುರಿತು ಭಯ ಪಡುವ ಅಗತ್ಯವಿಲ್ಲ. ಕೊಂಚ ಎಚ್ಚರ ಮತ್ತು ಏಕಾಗ್ರತೆ ವಹಿಸಿದರೆ ಸಾಕು. ನಮ್ಮ ನಿಗಾ ಸೋಂಕಿಗೆ ತುತ್ತಾದವರ ಮೇಲಲ್ಲ.. ಬದಲಿಗೆ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾದವರ ಮೇಲಿರಬೇಕು ಎಂದು ಹೇಳಿದ್ದಾರೆ.
ಅಂತೆಯೇ ಜನರು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಹೇಳಿರುವ ಅವರು, ‘ ಜನರು ಮಾಸ್ಕ್ ಧರಿಸುವುದನ್ನು ಮುಂದುವರಿಸಿ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು. ಮೂರನೇ ಅಲೆಯ ಅಷ್ಟು ಗಂಭೀರವಾಗಿರಲಿಲ್ಲ, ಆದ್ದರಿಂದ ಭಯ ಪಡುವ ಅಗತ್ಯವಿಲ್ಲ. ನಾವು ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಸಂಖ್ಯೆಯನ್ನು ಮಾತ್ರ ನೋಡಬೇಕು. ಒಂದು ಲಕ್ಷ ಜನರು ಅಥವಾ 50,000 ಜನರು ಸೋಂಕಿಗೆ ತುತ್ತಾಗುತ್ತಾರೆ ಎಂದರೆ ಏನೂ ಅರ್ಥವಲ್ಲ.. ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ” ಎಂದು ದೇವಿಶೆಟ್ಟಿ ಹೇಳಿದರು.
“ಇಡೀ ದೇಶವು ಸೋಂಕಿಗೆ ತುತ್ತಾಗಬಹುದು, ಆದರೆ ಆಸ್ಪತ್ರೆಯಲ್ಲಿ ಯಾವುದೇ ಕೋವಿಡ್ ರೋಗಿಗಳಿಲ್ಲದಿದ್ದರೆ, ಅದರಿಂದ ಯಾವುದೇ ಆತಂಕವಿಲ್ಲ. ಆದ್ದರಿಂದ ಆಸ್ಪತ್ರೆಯಲ್ಲಿನ ರೋಗಿಗಳ ಸಂಖ್ಯೆಯ ಮೇಲೆ ನಿಗಾ ವಹಿಸಬೇಕು.. ಎಂದು ನಾರಾಯಣ ಹೆಲ್ತ್‌ನ ಸಂಸ್ಥಾಪಕ-ಅಧ್ಯಕ್ಷರೂ ಕೂಡ ಆದ ದೇವಿ ಶೆಟ್ಟಿ ಹೇಳಿದರು.
ಇನ್ನು ರಾಜ್ಯದ ಪ್ರಸ್ತುತ ಕೋವಿಡ್ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹಿರಿಯ ಸಚಿವರು, ಅಧಿಕಾರಿಗಳು ಮತ್ತು ಆರೋಗ್ಯ ತಜ್ಞರೊಂದಿಗೆ ಪರಿಶೀಲನಾ ಸಭೆ ನಡೆಸಿದ್ದಾರೆ