| ಬ್ರಹ್ಮಾವರ ಎ.25(ಉಡುಪಿ ಟೈಮ್ಸ್ ವರದಿ): ಲಕ್ಷಾಂತರ ರೂಪಾಯಿ ಸಾಲ ಪಡೆದು ವಾಪಾಸ್ಸು ನೀಡದೆ ವಂಚಿಸಿರುವುದು ಮಾತ್ರವಲ್ಲದೆ ಸಾಲ ವಾಪಾಸ್ಸು ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವುದಾಗಿ ಹೇರೂರಿನ ಸಾಗರ್ ಆಚಾರ್ಯ ಎಂಬವರು ತಮ್ಮ ಸಂಬಂಧಿಕರಾದ ಸತ್ಯನಾರಾಯಣ ಆಚಾರ್ಯ ಎಂಬವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಸಾಗರ್ ಆಚಾರ್ಯ ಅವರ ಸಂಬಂಧಿಯಾಗಿರುವ ಶಿವಮೊಗ್ಗದ ಸತ್ಯನಾರಾಯಣ ಆಚಾರ್ಯ ಅವರು ವ್ಯವಹಾರದ ಉದ್ದೇಶಕ್ಕಾಗಿ 2021 ಜೂನ್ ತಿಂಗಳಿನಿಂದ 10,00,000 ರೂಸಾಲಕ್ಕೆ ಪದೇ ಪದೇ ಬೇಡಿಕೆ ಇಟ್ಟಿದ್ದರು. ಅದರಂತೆ ಸಾಗರ್ ಅವರು ತಮ್ಮ ಖಾತೆಯಿಂದ ಹಾಗೂ ತಮ್ಮ ದೊಡ್ಡಪ್ಪನ ಮಗನಾದ ರಮೇಶ ಆಚಾರ್ಯ ಎಂಬವರ ಖಾತೆಯಿಂದ ಹಂತ ಹಂತವಾಗಿ 6,39,000 ರೂಪಾಯಿ ಹಣವನ್ನು ನೀಡಿದ್ದರು.
ಆದರೆ ಬಳಿಕ ಆರೋಪಿಯು ಹಣವನ್ನು ವಾಪಸ್ಸು ನೀಡದೇ ವಂಚಿಸುತ್ತಾ ಬಂದಿದ್ದು, ಈ ಬಗ್ಗೆ ತಾನು ಪೋಲೀಸರಿಗೆ ದೂರು ನೀಡುವುದಾಗಿ ಹೇಳಿದಾಗ ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿ, ಹಣವನ್ನು ವಾಪಸ್ಸು ಕೊಡುವುದಿಲ್ಲ ಏನೂ ಬೇಕಾದರೂ ಮಾಡಿಕೋ ಎಂದು ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
| |