ಇನ್ನು ಮೂರ್ನಾಲ್ಕು ವಾರಗಳಲ್ಲಿ ಕೊರೋನಾ 4ನೇ ಅಲೆ- ಆರೋಗ್ಯ ಸಚಿವ ಡಾ ಕೆ ಸುಧಾಕರ್

ಬೆಂಗಳೂರು: ಕೋವಿಡ್ 4ನೇ ಅಲೆಯ ಭೀತಿ ಎದುರಾಗಿರುವುದರಿಂದ ತಾಂತ್ರಿಕ ಸಲಹಾ ಸಮಿತಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಇಂದು ಸೋಮವಾರ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಲಿದೆ, ಅದರಲ್ಲಿ ಮುಂಜಾಗ್ರತೆ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.

ಇಂದು ಮುಖ್ಯಮಂತ್ರಿಗಳ ಜೊತೆ ಸಭೆಗೆ ತೆರಳುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಕಳೆದ ಎರಡು ವಾರಗಳಿಂದ ಕೋವಿಡ್ ತಜ್ಞರ ಜೊತೆ, ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ. ಇದು ಕೋವಿಡ್ 4ನೇ ಅಲೆಯ ಅಥವಾ ಈಗಿರುವ ಕೊರೋನಾದ ರೂಪಾಂತರಿಯೇ, ಬೇರೆ ರಾಜ್ಯಗಳಲ್ಲಿ ಯಾವ ರೀತಿ ಹರಡುತ್ತಿದೆ ಎಂದು ನೋಡಿಕೊಂಡು ಮುಂದಿನ ಕ್ರಮದ ಬಗ್ಗೆ ಚರ್ಚಿಸಬೇಕಾಗುತ್ತದೆ ಎಂದರು.

ಕೋವಿಡ್ 3ನೇ ಅಲೆಯವರೆಗೆ ನಾವು ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದೇವೆ, ನಾಲ್ಕನೇ ಅಲೆಯನ್ನೂ ಎದುರಿಸುವ ಶಕ್ತಿಯಿದೆ. ಮಾಸ್ಕ್ ಧರಿಸುವ ಬಗ್ಗೆ, ಬೂಸ್ಟರ್ ಡೋಸ್ ಬಗ್ಗೆ ಕೂಡ ಚರ್ಚೆಗೆ ಬರಲಿದೆ ಎಂದರು. ಇನ್ನು ಕೇರಳ, ತಮಿಳುನಾಡು, ಮಹಾರಾಷ್ಟ್ರ, ದೆಹಲಿಯಲ್ಲಿ ಕಳೆದೊಂದು ವಾರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.ಕೊರೋನಾದಿಂದ ಮುಕ್ತವಾಗಿದ್ದ ರಾಜ್ಯಗಳಿಗೆ ಮತ್ತೆ ಕಂಟಕ ಎದುರಾಗಿದೆ. ಸದ್ದಿಲ್ಲದೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ನಾಲ್ಕನೇ ಅಲೆ ಖಚಿತ? ಜನರು ಆತಂಕಪಡುವ ಅಗತ್ಯವಿಲ್ಲ: ಇನ್ನು ಮೂರ್ನಾಲ್ಕು ವಾರಗಳಲ್ಲಿ ರಾಜ್ಯಕ್ಕೆ ನಾಲ್ಕನೇ ಅಲೆ ಅಪ್ಪಳಿಸುವ ಸಾಧ್ಯತೆಯಿದೆ. ಜನರು ಎಚ್ಚರಿಕೆಯಿಂದ ಇರಬೇಕು 3ನೇ ಅಲೆಯಂತೆ 4ನೇ ಅಲೆ ಅಪಾಯವಿಲ್ಲ, ಜನರು ಆತಂಕಪಡುವ ಅಗತ್ಯವಿಲ್ಲ, ಸೋಂಕಿತರು ತೀವ್ರ ಅಸೌಖ್ಯಕ್ಕೀಡಾಗುವ, ಆಸ್ಪತ್ರೆಗೆ ದಾಖಲಾಗುವವರ, ಸಾವಿನ ಸಂಖ್ಯೆ ಬಹಳ ಕಡಿಮೆಯಾಗಿರುತ್ತದೆ. ಆದರೆ ಕೊರೋನಾ ಜೀವಂತವಾಗಿದೆ ಎಂದು ಜನರು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ ಸಿ ಎನ್ ಮಂಜುನಾಥ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!