ರಾಜಕೀಯ ನಾಯಕರು ಬಿಲ್ಲವರ ಮನೆಬಾಗಿಲು ಕಾಯುವ ಸ್ಥಿತಿ ನಿರ್ಮಾಣ ಆಗಬೇಕು- ಸತ್ಯಜಿತ್
ಉಡುಪಿ: ನಾರಾಯಣ ಗುರುಗಳ ಶಿಕ್ಷಣ ಹಾಗೂ ಸಂಘಟನೆಯ ಮಹತ್ವವನ್ನು ಅರ್ಥೈಸಿಕೊಳ್ಳದ ಪರಿಣಾಮ ಬಿಲ್ಲವರು ಎಲ್ಲಾ ಕ್ಷೇತ್ರದಲ್ಲೂ ಹಿಂದೆ ಇದ್ದಾರೆ. ಕರಾವಳಿಯಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿರುವ ನಮಗೆ ಧಾರ್ಮಿಕ ಕ್ಷೇತ್ರದಲ್ಲಿ ಅಧಿಕಾರವಿಲ್ಲ. ಸಾಮಾಜಿಕ ನ್ಯಾಯವೂ ಸಿಗುತ್ತಿಲ್ಲ ಎಂದು ಶ್ರೀನಾರಾಯಣ ಗುರು ವಿಚಾರ ವೇದಿಕೆ ಕರ್ನಾಟಕ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದರು.
ಉಡುಪಿ ಬನ್ನಂಜೆ ಬಿಲ್ಲವ ಸೇವಾ ಸಂಘದ ಸಭಾಂಗಣದಲ್ಲಿ ಭಾನುವಾರ ನಡೆದ ಶ್ರೀನಾರಾಯಣ ಗುರು ವಿಚಾರ ವೇದಿಕೆ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಬಿಲ್ಲವ ಸಮುದಾಯಕ್ಕೆ ಸಂಬಂಧಿಸಿ 26 ಪಂಗಡಗಳಿದ್ದು, ನಾವೆಲ್ಲ ಒಂದೇ ವೇದಿಕೆಯಲ್ಲಿ ಸಂಘಟಿತರಾಗಬೇಕು. ಹೀಗಾದರೆ ನಮ್ಮ ಜನಸಂಖ್ಯೆ 40 ಲಕ್ಷ ದಾಟುತ್ತದೆ. ಜನಾರ್ದನ ಪೂಜಾರಿ ಹಾಗೂ ಬಂಗಾರಪ್ಪ ಅವರ ಬಳಿಕ ಬಿಲ್ಲವ ಸಮುದಾಯ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕವಾಗಿ ಕುಸಿದಿದೆ. ಶಿಕ್ಷಣ ಹಾಗೂ ಸಂಘಟಿತರಾಗಿ ರಾಜಕೀಯ ನಾಯಕರು ನಮ್ಮ ಮನೆಬಾಗಿಲು ಕಾಯುವ ಸ್ಥಿತಿ ನಿರ್ಮಿಸಬೇಕು. ಈ ರೀತಿಯ ಸ್ವಾಭಿಮಾನದ ಸಮಾಜ ನಮ್ಮದಾಗಬೇಕೆನ್ನುವ ನಿಟ್ಟಿನಲ್ಲಿ ಈ ವೇದಿಕೆ ಸ್ಥಾಪಿಸಲಾಗಿದೆ ಎಂದರು.
ವೇದಿಕೆಯ ರಾಜ್ಯ ಗೌರವ ಸಲಹೆಗಾರ ಬಿ.ಎನ್. ಶಂಕರ ಪೂಜಾರಿ, ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಜಗನ್ನಾಥ ಕೋಟೆ, ಉಪಾಧ್ಯಕ್ಷ ಅಚ್ಯುತ್ ಅಮೀನ್ ಕಲ್ಮಾಡಿ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಕೇಶ್ ಕಲ್ಯಾಣಪುರ, ಗೌರವಾಧ್ಯಕ್ಷ ರಾಜು ಪೂಜಾರಿ ಉಪ್ಪೂರು ಮೊದಲಾದವರು ಉಪಸ್ಥಿತರಿದ್ದರು.