| ಮಲ್ಪೆ ಎ.25 (ಉಡುಪಿ ಟೈಮ್ಸ್ ವರದಿ): ಪ್ರವಾಸಿ ತಾಣಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಅಥವಾ ಇನ್ಯಾವುದೋ ರೀತಿಯಲ್ಲಿ ಕಳ್ಳತನವಾದಾಗ ಸಾರ್ವಜನಿಕರು ಪೊಲೀಸರ ಮೊರೆ ಹೋಗುತ್ತಾರೆ. ಆದರೆ ಪೊಲೀಸರ ಸ್ವತ್ತುಗಳೇ ಕಳ್ಳತನವಾಗಿರುವ ಘಟನೆ ಮಲ್ಪೆ ಬೀಚ್ ನಲ್ಲಿ ನಡೆದಿದೆ.
ನಿನ್ನೆ ಮಲ್ಪೆ ಬೀಚ್ ಗೆ ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರಿನ ಯಲಹಂಕದ ಪೊಲೀಸರ ತಂಡದ ಸೊತ್ತುಗಳನ್ನೇ ಕಳ್ಳನೋರ್ವ ಎಗರಿಸಿದ್ದು, ಇದೀಗ ತಮ್ಮ ಸೊತ್ತುಗಳನ್ನು ಕಳೆದುಕೊಂಡ ಪೊಲೀಸರು ಮಲ್ಪೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹೌದು, ಬೆಂಗಳೂರಿನ ಯಲಹಂಕದ 1ನೇ ಬೆಟಾಲಿಯನ್ ಕೆ.ಎಸ್.ಐ.ಎಸ್.ಎಫ್ ನ ಪೊಲೀಸ್ ನಿರೀಕ್ಷಕರಾದ ಮಂಜುನಾಥ ಅವರು ಹಾಗೂ ಚಂದ್ರಶೇಖರ, ಶರಣಬಸಪ್ಪ, ಚಿರಂಜೀವಿ, ತ್ರಿಣೇಶ ಸೇರಿ ಒಟ್ಟು 5 ಜನ ನಿನ್ನೆ ಮಧ್ಯಾಹ್ನ 12 ಗಂಟೆ ವೇಳೆಗೆಪ್ರವಾಸಕ್ಕೆಂದು ಮಲ್ಪೆ ಬೀಚ್ ಗೆ ಬಂದಿದ್ದರು. ಈ ವೇಳೆ ನೀರಿನಲ್ಲಿ ಈಜಾಡುವ ಸಲುವಾಗಿ ತಮ್ಮ ಬ್ಯಾಗ್ ಸಹಿತ ಇತರ ಸೊತ್ತುಗಳನ್ನು ಕಿನಾರೆಯಲ್ಲಿ ಇಟ್ಟು ಈಜಾಡಲು ಹೋಗಿದ್ದರು. ಬಳಿಕ ಬಂದು ನೋಡಿದಾಗ ಕಿನಾರೆಯಲ್ಲಿ ಇಟ್ಟಿದ್ದ 3 ಕಾಲೇಜು ಬ್ಯಾಗ್, 4 ಸೆಲ್ ಪೋನ್, 5 ವಾಲೆಟ್ಸ್ , ಎಟಿಎಂ ಕಾರ್ಡ್, ಆದಾರಕಾರ್ಡ್, ಪಾನ್ ಕಾರ್ಡ್, ಮತದಾರ ಗುರುತಿನ ಚೀಟಿ, ಡಿಎಲ್, ಮಂಜುನಾಥ ಮತ್ತು ಚಂದ್ರಶೇಖರ ರವರ ಪೊಲೀಸ್ ಐಡಿ ಕಾರ್ಡ್ ಗಳು ಇಲ್ಲದೇ ಇರುವುದು ಗಮನಕ್ಕೆ ಬಂದಿದೆ.
ಅದರಂತೆ ಮಲ್ಪೆ ಕಡಲ ಕಿನಾರೆಯಲ್ಲಿ ಇಟ್ಟಿದ್ದ ಪೊಲೀಸರ ತಂಡದ ಸೊತ್ತುಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳ್ಳತನವಾದ ಸೊತ್ತಿನ ಒಟ್ಟು ಮೌಲ್ಯ 70,000 ಆಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. | |