| ಉಡುಪಿ ಎ.25 (ಉಡುಪಿ ಟೈಮ್ಸ್ ವರದಿ): ದೇಶ ಎತ್ತ ಸಾಗುತ್ತಿದೆ ಎನ್ನುವುದು ಪ್ರಶ್ನೆಯಲ್ಲ. ವಿದ್ಯಾರ್ಥಿಗಳ ಮನಸ್ಥಿತಿ ಎತ್ತ ಸಾಗುತ್ತಿದೆ ಎನ್ನುವುದು ಆತಂಕಕಾರಿ ವಿಚಾರ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಹಿಜಾಬ್ ಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಹಿಜಾಬ್ ಹೋರಾಟದ ವಿದ್ವಾರ್ಥಿನಿಯರು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆಯದೇ ವಾಪಾಸ್ಸಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು,ಹಿಜಾಬ್ ನ ಹೆಸರಿನಲ್ಲಿ ಕೆಲವು ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೇ ಸೆಡ್ಡು ಹೊಡೆದಿದ್ದಾರೆ. ಇದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಗಮನಿಸಬೇಕು. ಸಂವಿಧಾನ ಬದ್ಧವಾಗಿ ಹೈಕೋರ್ಟ್ ನ ಆದೇಶವನ್ನು ಸರಕಾರ ಪಾಲನೆ ಮಾಡುವಾಗ ಅದಕ್ಕೆ ನಾವು ಗೌರವ ಕೊಡುತ್ತಿಲ್ಲ ಎನ್ನುವ ಭಾವನೆ ವಿದ್ಯಾರ್ಥಿಗಳ ಮನಸ್ಥಿತಿ ಎತ್ತ ಸಾಗುತ್ತಿದೆ ಎಂಬ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೇಕಾದ ಅವಶ್ಯಕತೆ ಇದೆ ಎನ್ನಿಸುತ್ತದೆ ಎಂದರು.
ಹಾಗೂ ಸಂವಿಧಾನ ಪೂರಕವಾಗಿ ನ್ಯಾಯಾಲಯ ಕೊಟ್ಟಿರುವ ಆದೇಶವನ್ನು ಪಾಲನೆ ಮಾಡಬೇಕಾದದ್ದು ವಿದ್ಯಾರ್ಥಿಗಳ ಜವಾಬ್ದಾರಿ, ಹೊಣೆಗಾರಿಕೆ ಹಾಗೂ ಕರ್ತವ್ಯ ವಾಗಿದೆ. ಕೆಲವು ಬಾರಿ ಅವರು ಕರ್ತವ್ಯದಲ್ಲಿ ಆಸಕ್ತಿ ಇಲ್ಲದೆ ಸೆಡ್ಡು ಹೊಡೆಯುವುದನ್ನೇ ಮಾಡುತ್ತಾರೆ ಎಂದಾದರೆ ಕಾನೂನು ಕೂಡ ತನ್ನದೇ ಆದ ದಿಕ್ಕಿನಲ್ಲಿ ಸಾಗುತ್ತದೆ ಎಂದೆನಿಸುತ್ತದೆ ಎಂದರು.
ಇದೇ ವೇಳೆ ಹಿಜಾಬ್ ಹೋರಾಟದ ವಿದ್ಯಾರ್ಥಿನಿಯೋರ್ವರು ಟ್ವೀಟ್ ಮೂಲಕ ದೇಶ ಎತ್ತ ಸಾಗುತ್ತಿದೆ ಎಂದು ಕೇಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ದೇಶ ಸರಿಯಾದ ದಿಕ್ಕಿನಲ್ಲಿ ಸಂವಿಧಾನ ಬದ್ಧವಾಗಿ ಸಾಗುತ್ತಿದೆ ದೇಶದ ಆಶಯಗಳನ್ನು ಅರ್ಥಮಾಡಿಕೊಂಡು ಕಾನೂನು ಗೌರವಿಸ ಬೇಕಾದ್ದು ವಿದ್ಯಾರ್ಥಿಗಳ ಕರ್ತವ್ಯ. ದೇಶ ಎತ್ತ ಸಾಗುತ್ತಿದೆ ಎನ್ನುವುದು ಪ್ರಶ್ನೆಯಲ್ಲ. ವಿದ್ಯಾರ್ಥಿಗಳ ಮನಸ್ಥಿತಿ ಎತ್ತ ಸಾಗುತ್ತಿದೆ ಎನ್ನುವುದು ಆತಂಕಕಾರಿ ವಿಚಾರ ಎಂದು ಹೇಳಿದರು. | |