ಬ್ಯುಸಿನೆಸ್ ಲೋನ್ ಕೊಡಿಸುವುದಾಗಿ ವಂಚನೆ- ನಾಲ್ವರ ಬಂಧನ
ಬೆಂಗಳೂರು: ಬ್ಯುಸಿನೆಸ್ ಲೋನ್ ನೀಡುವ ನೆಪದಲ್ಲಿ ಜನರಿಗೆ ವಂಚನೆ ಮಾಡುತ್ತಿದ್ದ ನಾಲ್ವರನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಸತೀಶ್ (24) ಉದಯ್ (24) ಜಯರಾಮ್ (32) ಮತ್ತು ವಿನಯ್ (26) ಬಂಧಿತ ಆರೋಪಿಗಳು. ಇವರು ಈ ಹಿಂದೆ ಬ್ಯಾಂಕ್‌ಗಳಿಗೆ ಗ್ರಾಹಕ ಸೇವೆ ಒದಗಿಸುವ ಬಿಪಿಒದಲ್ಲಿ ಕೆಲಸ ಮಾಡುತ್ತಿದ್ದರು.
ಆರೋಪಿಗಳು ಪೀಣ್ಯದಲ್ಲಿ ಸಿಕ್ಕಿ ಬಿದ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ವೊಂದರ ಎಕ್ಸಿಕ್ಯೂಟಿವ್ ಎಂದು ಹೇಳಿಕೊಂಡು ಬ್ಯುಸಿನೆಸ್ ಲೋನ್ ಕೊಡಿಸುವುದಾಗಿ ಜನರಿಗೆ ಕರೆ ಮಾಡುತ್ತಿದ್ದರು. ದಾಖಲೆಗಳನ್ನು ಪಡೆದುಕೊಂಡು, ದಾಖಲಾತಿ ಪರಿಶೀಲನೆ ನಂತರ ಸಾಲ ಕೊಡಿಸುವುದಾಗಿ ಭರವಸೆ ನೀಡುತ್ತಿದ್ದರು.
ಸಾಲಗಾರರಿಂದ ನಂಬಿಕೆ ಪಡೆದ ನಂತರ ಆರೋಪಿಗಳು, ಸಾಲ ಮಂಜೂರಾಗಿದ್ದು, ಪ್ರೊಸೆಸಿಂಗ್ ಶುಲ್ಕ, ಐಟಿಆರ್ ಮತ್ತು ಇನ್ಸೂರೆನ್ಸ್ ಹಣ ಕಟ್ಟಬೇಕೆಂದು ಹೇಳುತ್ತಿದ್ದರು. ನಂತರ ಲಕ್ಷಾಂತರ ಹಣ ಪಡೆದು ಸಿಮ್ ಕಾರ್ಡ್ ಬದಲಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಕಾರ್ಯಕ್ಷೇತ್ರ ಮಾಡಿಕೊಂಡಿದ್ದ ಬಾಡಿಗೆ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದು, ನಾಲ್ಕು ಮೊಬೈಲ್ ಫೋನ್ ಗಳು, ಏಳು ಸಿಮ್ ಕಾರ್ಡ್ ಗಳು, 1.5 ಲಕ್ಷ ಹಣವಿದ್ದ ಬ್ಯಾಂಕ್ ಆಕೌಂಟ್ ನ್ನು ವಶಕ್ಕೆ ಪಡೆದಿದ್ದಾರೆ. 18 ಲಕ್ಷ ಸಾಲ ಮಂಜೂರಾಗಿದೆ ಎಂದು ಹೇಳಿ, 1.3 ಲಕ್ಷ ಹಣ ಪಡೆದಿದ್ದರು. ನಂತರ ಪ್ರತಿಕ್ರಿಯೆ ನೀಡದಿದ್ದಾಗ ಮೋಸಹೋದ ಗ್ರಾಹಕರು ದೂರು ನೀಡಿದ್ದಾಗಿ ಪೊಲೀಸರು ಹೇಳಿದ್ದಾರೆ.