ಲೋಕೋಪಯೋಗಿ ಇಲಾಖೆ ಜೆಇ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ- ಬ್ಲ್ಯೂಟೂತ್‌ ಬಳಕೆ ವಿಡಿಯೋ ವೈರಲ್

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರಬಹುದಾದ ಅಕ್ರಮ ಈಗ ಮತ್ತಷ್ಟು ಅನುಮಾನಗಳಿಗೆ ಇಂಬು ನೀಡಿದೆ. ವ್ಯಕ್ತಿಯೊಬ್ಬ ಲಾಡ್ಜ್‌ನಲ್ಲಿ ಕುಳಿತು ಮೊಬೈಲ್‌ ಮೂಲಕ ಉತ್ತರಗಳನ್ನು ಹೇಳುತ್ತಿರುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

2021ರ ಡಿಸೆಂಬರ್‌ 14ರಂದು ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಲೋಕೋಪಯೋಗಿ ಇಲಾಖೆಯ, ಸಹಾಯಕ ಎಂಜಿನಿಯರ್ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ ಉತ್ತರಗಳನ್ನೇ ಈ ವ್ಯಕ್ತಿ ಮೊಬೈಲ್‌ ಮೂಲಕ ಅಭ್ಯರ್ಥಿಗೆ ಹೇಳಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಪರೀಕ್ಷೆಯಲ್ಲೂ ಬ್ಲ್ಯೂಟೂತ್‌ ಬಳಸಿದ ಅಕ್ರಮಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್‌ ಮಂಜುನಾಥ ಮೇಳಕುಂದಿ ಎಂಬುವವರನ್ನು ಡಿಸೆಂಬರ್‌ನಲ್ಲಿಯೇ ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಯಾವುದೇ ಪ್ರಕರಣ ದಾಖಲಿಸದೇ ಹಾಗೇ ಬಿಟ್ಟಿದ್ದರು.

ಸದ್ಯ ಪಿಎಸ್ಐ ನೇಮಕಾತಿ ಪರೀಕ್ಷೆಯ ಹಗರಣದಲ್ಲಿ ಇದೇ ಮಂಜುನಾಥ ಭಾಗಿಯಾದ ಸುಳಿವು ಸಿಕ್ಕಿತ್ತು. ಸಿಐಡಿ ಅಧಿಕಾರಿಗಳು ಕಲಬುರಗಿಯಲ್ಲಿರುವ ಅವರ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಲೋಕೋಪಯೋಗಿ ಇಲಾಖೆಯ, ಸಹಾಯಕ ಎಂಜಿನಿಯರ್ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದ 10 ಅಭ್ಯರ್ಥಿಗಳ ಹಾಲ್‌ಟಿಕೆಟ್‌ಗಳು ಪತ್ತೆಯಾಗಿದ್ದವು. ಹೀಗಾಗಿ, ಈ ಎರಡೂ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ತಂಡ ಒಂದೇ ಇರಬಹುದು ಎಂಬ ತೀರ್ಮಾಣಕ್ಕೆ ಅಧಿಕಾರಿಗಳು ಬಂದಿದ್ದಾರೆ.

ಪಿಎಸ್‌ಐ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಮೊದಲಿಗೆ ಬಂಧಿತನಾದ ಅಭ್ಯರ್ಥಿ ವೀರೇಶ ಮೇಳಕುಂದಾ, ಇದೇ ಮಂಜುನಾಥ ಅವರಿಗೆ ಹಣ ಕೊಟ್ಟಿದ್ದ ಎಂಬ ಸಂಗತಿಯೂ ಅಧಿಕಾರಿಗಳಿಗೆ ಲಭ್ಯವಾಗಿದೆ. ಹೀಗಾಗಿ, ಅವರ ಮನೆ ಮೇಲೆ ದಾಳಿ ನಡೆಸಿದ್ದರು. ಪ್ರಕರಣದಲ್ಲಿ ಹೆಸರುಕೇಳಿಬಂದಾಗಿನಿಂದಲೂ ಎಂಜಿನಿಯರ್‌ ಮಂಜುನಾಥ ತಲೆಮರೆಸಿ ಕೊಂಡಿದ್ದಾರೆ. ಅವರ ಬಂಧನದ ನಂತರವೇ ಎಲ್ಲದಕ್ಕೂ ಸ್ಪಷ್ವ ಉತ್ತರ ಸಿಗಲಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಇಡೀ ಪ್ರಕರಣಕ್ಕೆ ದೊಡ್ಡ ತಿರುವು ನೀಡಿದ ವಿಡಿಯೊ ತುಣುಕು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದರಲ್ಲಿ ಉತ್ತರಗಳನ್ನು ಓದಿ ಹೇಳುತ್ತಿರುವ ವ್ಯಕ್ತಿ ಯಾರು? ಯಾವ ಊರಿನ ಲಾಡ್ಜ್‌ನಲ್ಲಿ ಈತ ಕುಳಿತಿದ್ದ, ಯಾರಿಗೆ ಉತ್ತರ ಹೇಳುತ್ತಿದ್ದ, ಅದನ್ನು ವಿಡಿಯೊ ಮಾಡಿದ್ದು ಯಾರು? ಇಷ್ಟು ತಿಂಗಳ ನಂತರ ಹರಿಬಿಟ್ಟಿದ್ದು ಯಾರು… ಹೀಗೆ ಹಲವು ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರ ಕಂಡುಕೊಳ್ಳಬೇಕಾಗಿದೆ.

ಆದರೆ, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ ಉತ್ತರಗಳನ್ನೇ ಈತ ವಿಡಿಯೊದಲ್ಲಿ ಹೇಳಿದ್ದಾನೆ ಎನ್ನುವುದು ಮಾತ್ರ ಖಚಿತವಾಗಿದೆ. ಈತ ಮೂರು ಬಾರಿ ರಿಪೀಟ್‌ ಮಾಡಿ ಹೇಳಿದ್ದು ವಿಡಿಯೊದಲ್ಲಿದೆ. ಸರಿ ಉತ್ತರ ಮಾರ್ಕ್‌ ಮಾಡಿದ ಪ್ರಶ್ನೆಪತ್ರಿಕೆ, ಬ್ಲೂಟೂತ್‌ ಹಾಗೂ ಎರಡು ಮೊಬೈಲ್‌ಗಳನ್ನು ಈತ ಬಳಸಿಕೊಂಡಿದ್ದಾನೆ.

ಡಿ.14ರಂದು ನಡೆದ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ನೇಮಕಾತಿ ಪರೀಕ್ಷೆಯ ಅಭ್ಯರ್ಥಿಗಳು ಪ್ರಯಾಣಿಸುತ್ತಿದ್ದ ಹಾಸನ–ಸೊಲ್ಲಾಪುರ ಹಾಗೂ ಉದ್ಯಾನ್ ಎಕ್ಸ್‌ಪ್ರೆಸ್‌ ರೈಲುಗಳು ತಡವಾಗಿ ಕಲಬುರಗಿ ತಲುಪಿದ್ದವು. ಇದರಿಂದಾಗಿ ಮಧ್ಯಾಹ್ನದ 2ನೇ ಪರೀಕ್ಷೆಯನ್ನು ಮಾತ್ರ ಅಭ್ಯರ್ಥಿಗಳು ಬರೆದಿದ್ದರು. ಮೊದಲ ಪರೀಕ್ಷೆ ಬರೆಯಲು ಡಿಸೆಂಬರ್‌ 29ರಂದು ಮತ್ತೆ ಅವಕಾಶ ನೀಡಲಾಗಿತ್ತು. ಪರೀಕ್ಷೆಯಲ್ಲಿ ಅಕ್ರಮ ನಡೆಯ ಬಾರದು ಎಂಬ ಕಾರಣದಿಂದಲೇ ಲೋಕಸೇವಾ ಆಯೋಗವು ಉತ್ತರ ಕರ್ನಾಟಕದ ಭಾಗದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ, ದಕ್ಷಿಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಕಲಬುರಗಿಯಲ್ಲಿ ಪರೀಕ್ಷೆ ಬರೆಯುವಂತೆ ಅದಲು ಬದಲು ಮಾಡಿತ್ತು.

Leave a Reply

Your email address will not be published. Required fields are marked *

error: Content is protected !!