| ಹೊಸದಿಲ್ಲಿ, ಎ.25: ದೇಶದಲ್ಲಿ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದಎಚ್.ಐ.ವಿ ಸೋಂಕಿಗೆ ತುತ್ತಾಗಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಹೇಳಿದೆ.
ಆರ್ಟಿಐ ಮೂಲಕ ಕೇಳಲಾದ ಪ್ರಶ್ನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ನೀಡಿದ ಉತ್ತರದಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಮಾಹಿತಿ ಪ್ರಕಾರ, ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಕಳೆದೊಂದು ದಶಕದಲ್ಲಿ 17 ಲ.ಕ್ಕೂ ಹೆಚ್ಚು ಭಾರತೀಯರು ಎಚ್ಐವಿ ಸೋಂಕಿಗೆ ತುತ್ತಾಗಿದ್ದಾರೆ ಎಂದು ಹೇಳಿದೆ. ಆದರೆ ಎಚ್ಐವಿ ಸೋಂಕಿಗೆ ತುತ್ತಾಗುತ್ತಿರುವ ಜನರ ಸಂಖ್ಯೆಯಲ್ಲಿ ಕಳೆದೊಂದು ದಶಕದಲ್ಲಿ ಗಣನೀಯ ಇಳಿಕೆಯಾಗಿದೆ.
ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ 2011-12ರಲ್ಲಿ 2.4 ಲ.ಜನರು ಎಚ್ಐವಿ ಸೋಂಕಿಗೆ ತುತ್ತಾಗಿದ್ದರೆ 2020-21ರಲ್ಲಿ ಈ ಸಂಖ್ಯೆ 85,268ಕ್ಕೆ ಇಳಿದಿದೆ. ಭಾರತದಲ್ಲಿ 2011ರಿಂದ 2021ರ ನಡುವೆ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ 17,08,777 ಜನರು ಎಚ್.ಐವಿ ಸೋಂಕಿಗೊಳಗಾಗಿದ್ದಾರೆ ಎಂದು ಮಧ್ಯಪ್ರದೇಶದ ಆರ್ಟಿಐ ಕಾರ್ಯಕರ್ತ ಚಂದ್ರಶೇಖರ ಗೌರ್ ಅವರ ಆರ್ಟಿಐ ಅರ್ಜಿಗೆ ನೀಡಿದ್ದ ಉತ್ತರದಲ್ಲಿ ಎನ್.ಸಿಒ ತಿಳಿಸಿದೆ. ರಾಜ್ಯಗಳ ಪೈಕಿ ಇಂತಹ ಅತ್ಯಂತ ಹೆಚ್ಚು ಪ್ರಕರಣಗಳು (3,18,814) ಆಂಧ್ರಪ್ರದೇಶದಲ್ಲಿ ದಾಖಲಾಗಿದ್ದರೆ ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ (2,84,577),ಕರ್ನಾಟಕ (2,12,982),ತಮಿಳುನಾಡು (1,16,536),ಉತ್ತರ ಪ್ರದೇಶ (1,10,911) ಮತ್ತು ಗುಜರಾತ (87,440) ರಾಜ್ಯಗಳಿವೆ.
ಅಲ್ಲದೆ, 2011-12 ಮತ್ತು 2020-21ರ ನಡುವೆ ರಕ್ತ ಮತ್ತು ರಕ್ತದ ಉತ್ಪನ್ನಗಳ ಮೂಲಕ 15,782 ಜನರು ಎಚ್ಐವಿ ಸೋಂಕಿಗೆ ತುತ್ತಾಗಿದ್ದರೆ,18 ತಿಂಗಳ ಪ್ರತಿಕಾಯ ಪರೀಕ್ಷೆಯ ದತ್ತಾಂಶಗಳಂತೆ 4,423 ಮಕ್ಕಳಿಗೆ ತಾಯಂದಿರಿಂದ ಸೋಂಕು ಹರಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಚ್.ಐ. ವಿ ಹರಡುವಿಕೆಯ ಪ್ರಕರಣಗಳಲ್ಲಿ ಸ್ಥಿರವಾದ ಇಳಿಕೆ ಕಂಡುಬಂದಿದೆ. 2020ಕ್ಕೆ ಇದ್ದಂತೆ ದೇಶದಲ್ಲಿ 81,430 ಮಕ್ಕಳು ಸೇರಿದಂತೆ 23,18,737 ಜನರು ಎಚ್ಐವಿಯೊಂದಿಗೆ ಬದುಕುತ್ತಿದ್ದಾರೆ ಎಂದು ಹೇಳಿದೆ.
| |