| ಬೆಂಗಳೂರು ಎ.21: ಕೇಂದ್ರ ಸರಕಾರ ಜಾರಿಗೊಳಿಸಿದ ಎಲ್ಲಾ ಯೋಜನೆಗಳು ಹಿಂದೂ- ಮುಸ್ಲಿಮರು ಎಂಬ ಭೇದ ಭಾವವಿಲ್ಲದೆ ಸಮಾಜದ ಎಲ್ಲರನ್ನೂ ತಲುಪುತ್ತಿವೆ. ಆದ್ದರಿಂದ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಅರ್ಥಪೂರ್ಣವಾಗಿ ಜಾರಿಯಾಗಿದೆ ಎಂದು ಕರ್ನಾಟಕದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.
ಈ ವಿಚಾರವಾಗಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಬಿಜೆಪಿ ಸರಕಾರದ ವಿರುದ್ಧ ಭ್ರಷ್ಟಾಚಾರ ಸಂಬಂಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಅರ್ಥಪೂರ್ಣವಾಗಿ ಜಾರಿಯಾಗಿದೆ. ಮಾಧ್ಯಮದವರು ಮುಸ್ಲಿಮರಿರುವ ಜಾಗಗಳಿಗೆ ತೆರಳಿ ಈ ವಿಷಯವನ್ನು ಖಚಿತಪಡಿಸಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ತುಷ್ಟೀಕರಣ ನೀತಿ ಅನುಷ್ಠಾನದಲ್ಲಿತ್ತು ಎಂದು ಆರೋಪಿಸಿದ ಅವರು, ಗಲಭೆಕೋರರು, ಹಿಂಸಾ ಪ್ರವೃತ್ತಿಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಸಮರ್ಪಕ ತನಿಖೆ ನಡೆಸಿ ಕಠಿಣ ಕ್ರಮಗಳನ್ನು ಸರಕಾರ ತೆಗೆದುಕೊಳ್ಳಲಿದೆ ಎಂದರು. ಇದೇ ವೇಳೆ ಪಕ್ಷ ಸಂಘಟನೆ ಬಗ್ಗೆ ಮಾತನಾಡಿದ ಅವರು, ಪಕ್ಷವನ್ನು ಬಲಪಡಿಸಲು ರೋಡ್ ಮ್ಯಾಪ್ ಸಿದ್ಧಗೊಳಿಸಿದ್ದೇವೆ. ಬೂತ್ ಸಮ್ಮೇಳನ, ಮಂಡಲ ಸಮ್ಮೇಳನ ಸೇರಿದಂತೆ ವಿವಿಧ ಹಂತಗಳಲ್ಲಿ ಸಮ್ಮೇಳನಗಳೂ ನಿಗದಿಯಂತೆ ನಡೆಯಲಿವೆ ಎಂದರು. | |