ಅಕ್ರಮ ಭೂ ಡಿನೋಟಿಫಿಕೇಷನ್ ಪ್ರಕರಣ: ಬಿ.ಎಸ್ ಯಡಿಯೂರಪ್ಪಗೆ ಸಮನ್ಸ್ ನೀಡಲಾಗದ ಅಧಿಕಾರಿಗಳು
ಬೆಂಗಳೂರು ಎ.21: ಅಕ್ರಮ ಭೂ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇನ್ನೂ ಸಮನ್ಸ್ ನೀಡಲಾಗಿಲ್ಲ ಎಂದು ತಿಳಿದು ಬಂದಿದೆ.
ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯಕ್ಕೆ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, 2012ರ ಭೂ ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ಯಡಿಯೂರಪ್ಪ ಅವರಿಗೆ ಸಮನ್ಸ್ ನೀಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಹಾಗೂ ಏಪ್ರಿಲ್ 8, 13 ಮತ್ತು 16ನೇ ತಾರೀಖಿನಂದು ತಾವು ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿದ್ದೆವು, ಆದರೆ ಯಡಿಯೂರಪ್ಪ ಅವರು ರಾಜ್ಯ ಪ್ರವಾಸದಲ್ಲಿರುವ ಕಾರಣ ಸಮನ್ಸ್ ನೀಡಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13 (1) (ಡಿ) (ಕ್ರಿಮಿನಲ್ ದುರ್ನಡತೆ) ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಏಪ್ರಿಲ್ 19 ರಂದು ವಿಚಾರಣೆಗೆ ಹಾಜರಾಗುವಂತೆ ಆರೋಪಿ ನಂ. 2 ಯಡಿಯೂರಪ್ಪ ಅವರಿಗೆ ವಿಚಾರಣಾ ನ್ಯಾಯಾಲಯ ತಿಳಿಸಿದೆ. 2019 ರಲ್ಲಿ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಯಡಿಯೂರಪ್ಪ ಹೈಕೋರ್ಟ್ಗೆ ಹೋಗಿದ್ದರು, ಆದರೆ 2020 ರಲ್ಲಿ ಅದನ್ನು ವಜಾಗೊಳಿಸಲಾಯಿತು. ಹೀಗಾಗಿ ನೇರವಾಗಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.
ಇನ್ನು ಯಡಿಯೂರಪ್ಪ ಅವರು ತಮಗೆ ಜಾರಿಯಾಗಿರುವ ಸಮನ್ಸ್ ರದ್ದು ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ವಿಶೇಷ ಮೇಲ್ಮನವಿ ಸಲ್ಲಿಸಿರುವ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ಎಲ್ಲಾ ಪ್ರಕ್ರಿಯೆಗೆ ತಡೆ ನೀಡುವಂತೆ ಹಾಗೂ ಆ ಪ್ರಕರಣವನ್ನು ರದ್ದು ಮಾಡುವಂತೆ ಕೋರಿದ್ದಾರೆ.