ರಾಮಮಂದಿರಕ್ಕೆ ಭೂಮಿ ಪೂಜೆ: ರಾಜ್ಯಾದ್ಯಂತ ಪೊಲೀಸ್ ಬಿಗಿ ಭದ್ರತೆ
ಬೆಂಗಳೂರು: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನಾಳೆ ಭೂಮಿ ಪೂಜೆ ನೆರೆವೇರಲಿರುವ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಇದು ಅತಿ ಸೂಕ್ಷ್ಮ ವಿಚಾರವಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಡಿಜಿಐಜಿಪಿ ಪ್ರವೀಣ್ ಸೂದ್ ಮತ್ತು ಎಡಿಜಿಪಿ (ಕಾನೂನು ಸುವ್ಯವಸ್ಥೆ ವಿಭಾಗ) ಅಮರ್ ಕುಮಾರ್ ಪಾಂಡೆ ಅವರು ರಾಜ್ಯಾದ್ಯಂತ ಹದ್ದಿನ ಕಣ್ಣೀಡುವಂತೆ ಎಲ್ಲಾ ವಲಯದ ಐಜಿಪಿಗಳು ಮತ್ತು ಎಸ್ಪಿಗಳಿಗೆ ಸೂಚಿಸಿದ್ದಾರೆ.
ಮಂಗಳವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ಡಿಜಿಐಜಿಪಿ ಮತ್ತು ಎಡಿಜಿಪಿ ಅವರು ರಾಜ್ಯದಲ್ಲಿ ಕೈಗೊಳ್ಳಬೇಕಾದ ಬಿಗಿ ಭದ್ರತೆ ಕುರಿತು ಮಹತ್ವದ ಸಭೆ ನಡೆಸಿದರು. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆ ನೇರವೇರಿಸಲಿದ್ದು, ಬೆಂಗಳೂರು ಸೇರಿ ರಾಜ್ಯಾದ್ಯಂತ ಕಟ್ಟೆಚ್ಚರವಹಿಸಲಾಗುತ್ತಿದೆ. ಆಯಾಕಟ್ಟಿನ ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ಬಂದೋಬಸ್ತ್ ಮಾಡಲಾಗುತ್ತಿದೆ.
ಹಿರಿಯ ಪೊಲೀಸ್ ಆಧಿಕಾರಿಗಳು ಸಭೆಯಲ್ಲಿ ಭೂಮಿ ಪೂಜೆ ವೇಳೆ ರಾಜ್ಯದಲ್ಲಿ ಗಲಭೆ ಸೃಷ್ಟಿಯಾಗುವ ಸಂಭವವಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕು. ಭೂಮಿ ಪೂಜೆ ದಿನ ಮತೀಯ ಸಂಘಟನೆಗಳು, ಸಿಎಎ ಹಾಗೂ ಎನ್ ಆರ್ ಸಿ ಹೋರಾಟಗಾರರ ಮೇಲೆ ಕಣ್ಣಿಡಬೇಕು ಎಂದು ಸೂಚಿಸಿದ್ದಾರೆ.
ಯಾವುದೇ ಮೆರವಣಿಗೆ, ವಿಜಯೋತ್ಸವ, ಪ್ರತಿಭಟನೆಗೆ ಅನುಮತಿ ಇರುವುದಿಲ್ಲ. ಕೋಮು ಸೂಕ್ಷ್ಮ ಜಿಲ್ಲೆಗಳಲ್ಲಿ ತೀವ್ರ ನಿಗಾ ಇಡಬೇಕು. ಕೋಮು ಸೌಹಾರ್ಧತೆಗೆ ಧಕ್ಕೆ ತರುವವರು ಕಂಡುಬಂದರೆ ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಬೇಕು ಹಾಗೂ ಯಾವುದೇ ದೇವಸ್ಥಾನ, ಮಸೀದಿಗಳಲ್ಲಿ ಬಾವುಟ ಕಟ್ಟುವಂತಿಲ್ಲ. ಜನನಿಬಿಡ ಪ್ರದೇಶಗಳು, ಮಾಲ್, ದೇವಸ್ಥಾನ, ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಆದೇಶಿಸಿದ್ದಾರೆ.
ಹಿಂದೂಪರ ಸಂಘಟನೆ, ಹಿಂದೂಯೇತರ ಸಂಘಟನೆಗಳ ಮೇಲೆ ವಿಶೇಷ ನಿಗಾ ಇಡಬೇಕು. ಡಿಎಆರ್ ಮತ್ತು ಕೆಎಸ್ಆರ್ ಪಿ ತುಕಡಿಗಳನ್ನು ಅಲ್ಲಲ್ಲಿ ನಿಯೋಜಿಸಬೇಕು. ಪೊಲೀಸ್ ಆಯುಕ್ತಾಲಗಳು ಇರುವ ಪ್ರದೇಶ ಮತ್ತು ಜಿಲ್ಲೆಗಳಲ್ಲಿ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಿ ಭದ್ರತೆ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.