ಹುಬ್ಬಳ್ಳಿ ಗಲಭೆ ಪ್ರಕರಣ: ಆರೋಪಿಗಳನ್ನು ಕಾಂಗ್ರೆಸ್ ಪ್ರೋತ್ಸಾಹಿಸುತ್ತಿದೆ- ಬಿ.ಎಸ್. ಯಡಿಯೂರಪ್ಪ
ದಾವಣಗೆರೆ ಎ.19: ಕಾಂಗ್ರೆಸ್ ನಾಯಕರೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಕಾರಣರಾದವರನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿ ಅವರು, ಹುಬ್ಬಳ್ಳಿ ಗಲಭೆ ವೇಳೆ ಕಲ್ಲು ತೂರಾಟ ನಡೆದಿದೆ. ಇದರಲ್ಲಿ ಮುಸ್ಲಿಂ ನಾಯಕ ಅಲ್ತಾಫ್ ಹಳ್ಳೂರು ಭಾಗಿ ಆಗಿರುವುದು ಜಗಜ್ಜಾಹೀರವಾಗಿದೆ. ಆದರೆ ಕಾಂಗ್ರೆಸ್ ನಾಯಕರು ಅಮಾಯಕರನ್ನು ಬಂಧಿಸಬೇಡಿ ಎನ್ನುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗಲಭೆ ಮಾಡಿದವರನ್ನು ಕಾಂಗ್ರೆಸ್ ನಾಯಕರು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯನವರಿಗೆ ಇದು ಶೋಭೆ ತರುವ ಕೆಲಸ ಅಲ್ಲ ಎಂದ ಅವರು, ವಿರೋಧ ಪಕ್ಷದ ನಾಯಕರಾಗಿ ಈ ರೀತಿ ಮಾತನಾಡಬಾರದು ಬದಲಾಗಿ ಸ್ಥಳಕ್ಕೆ ಹೋಗಿ ನೋಡಿಕೊಂಡು ಬರಬೇಕು. ಅವರು ವಾಸ್ತವ ಸ್ಥಿತಿ ನೋಡಿ ಮಾತನಾಡಲಿ ಎಂದರು.
ಮಿಷನ್ 150 ಟಾರ್ಗೆಟ್ ಇಟ್ಟುಕೊಂಡು ರಾಜ್ಯವ್ಯಾಪಿ ಕಾರ್ಯಕ್ರಮ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದೇವೆ. ಈಗಾಗಲೇ ವಿಜಯನಗರದಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಚುನಾವಣೆಗೂ ಒಂದು ವರ್ಷ ಮೊದಲೇ ಪಕ್ಷದ ಸಂಘಟನೆಗೆ ಮುಂದಾಗಿದ್ದೇವೆ. ಪಂಚರಾಜ್ಯಗಳ ಫಲಿತಾಂಶ ಬಿಜೆಪಿಯಲ್ಲಿ ಹೊಸ ರೀತಿ ಉತ್ಸವ ಬಂದಿದೆ. ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ. ರಾಜ್ಯದಲ್ಲಿ ಸ್ವಲ್ಪ ಉಸಿರಾಡುತ್ತಿದೆ. ಇಲ್ಲಿಯೂ ಸಹ ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳುಹಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದರು.
ದಿಂಗಲೇಶ್ವರ ಶ್ರೀ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಸಿಎಂ ಹೇಳಿಕೆ ನೀಡಿದ್ದಾರೆ. ಒಬ್ಬ ಸ್ವಾಮೀಜಿ ಆದವರು ಈ ರೀತಿಯಾಗಿ ಹೇಳುವುದು ಶೋಭೆ ತರುವುದಲ್ಲ. ಈಶ್ವರಪ್ಪ ಅದಷ್ಟು ಬೇಗ ಆರೋಪ ಮುಕ್ತರಾಗಿ ಬರುತ್ತಾರೆ. ಅವರು ಯಾವ ತಪ್ಪು ಮಾಡಿಲ್ಲ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.