ದೇವರಿಂದಲೂ ಕಮಿಷನ್ ಕೇಳುವ ನಿಮ್ಮದು ಯಾವ ರೀತಿಯ ಧರ್ಮ ರಕ್ಷಣೆ?- ಮಾಜಿ ಸಿಎಂ ಸಿದ್ದರಾಮಯ್ಯ
ಮಂಡ್ಯ ಎ.18: ದೇವರಿಂದಲೂ ಕಮಿಷನ್ ಕೇಳುವ ನಿಮ್ಮದು ಯಾವ ರೀತಿಯ ಧರ್ಮ ರಕ್ಷಣೆ?’ ಎಂದು ಬಿಜೆಪಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದ್ದಾರೆ.
ಮಠಗಳ ಅನುದಾನ ಪಡೆಯಲು ಕಮಿಷನ್ ಕೊಡಬೇಕಾಗುತ್ತದೆ ಎಂಬ ಸರ್ಕಾರದ ವಿರುದ್ಧದ ದಿಂಗಾಲೇಶ್ವರ ಸ್ವಾಮೀಜಿ ಅವರ ಆರೋಪದ ಕುರಿತು ಸರಣಿ ಟ್ವೀಟ್ ಮೂಲಕ ಟೀಕಿಸಿರುವ ಅವರು, ‘ಧರ್ಮ ರಕ್ಷಕರು ಎಂದು ತಮ್ಮನ್ನು ಕರೆದುಕೊಳ್ಳುವ ಬಿಜೆಪಿಯವರು ಮಠ, ಮಂದಿರಗಳ ಅನುದಾನವನ್ನೂ ಬಿಡದೆ 30% ಕಮಿಷನ್ ತಿಂದು ತೇಗುತ್ತಿರುವುದು ನಾಚಿಕೆಗೇಡು. 10% ಡಿಸ್ಕೌಂಟ್ ಯಾಕೆ? ಅದನ್ನು ತಿಂದು ಬಿಡಿ. ದೇವರಿಂದಲೂ ಕಮಿಷನ್ ಕೇಳುವ ನಿಮ್ಮದು ಯಾವ ರೀತಿಯ ಧರ್ಮ ರಕ್ಷಣೆ? ಎಂದು ಬಿಜೆಪಿಗೆ ಪ್ರಶ್ನೆ ಮಾಡಿದ್ದಾರೆ. ಹಾಗೂ ‘ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ನನ್ನ ಬಳಿ ಸಾಕ್ಷಿಯಿದೆ ಎಂದು ಖಾಲಿ ಬುಟ್ಟಿಯ ಮುಂದೆ ನಿಂತು ಪುಂಗಿ ಊದಬೇಡಿ, ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿ. ಬುಟ್ಟಿಯ ಒಳಗಿರುವುದು ನಾಗರ ಹಾವೋ, ಹಾವಿನಪುರದ ಹಾವೋ ನೋಡಿಯೇ ಬಿಡೋಣ’ ಎಂದು ತಿರುಗೇಟು ನೀಡಿದರು.