| ಚೆನ್ನೈ ಎ.18: ತಮಿಳುನಾಡಿನ ಪಶ್ಚಿಮ ತಿರುವಳ್ಳೂರ್ ನಲ್ಲಿ ಇತ್ತೀಚೆಗೆ ನಡೆದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಬಿಜೆಪಿ ಘಟಕದ ಕಾರ್ಯದರ್ಶಿ ಸತೀಶ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ತಮ್ಮ ಕಾರಿಗೆ ತಾವೇ ಬೆಂಕಿ ಹಚ್ಚಿ ಸುಳ್ಳು ದೂರು ದಾಖಲಿಸಿದ ಆರೋಪದಡಿಯಲ್ಲಿ ಸತೀಶ್ ನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಅತೀಶ್ ಚೆನ್ನೈನಲ್ಲಿರುವ ತಮ್ಮ ನಿವಾಸದ ಮುಂದೆ ನಿಲ್ಲಿಸಿದ್ದ ಕಾರಿಗೆ ಯಾರೋ ಬೆಂಕಿ ಇಟ್ಟಿರುವುದಾಗಿ ಪೊಲೀಸರಲ್ಲಿ ದೂರು ಕೊಟ್ಟಿದ್ದರು. ಘಟನೆಗೆ ಸಂಬಂಧಿಸಿ ವಿಚಾರಣೆ ನಡೆಸಿದಾಗ ಕುತೂಹಲಕಾರಿ ವಿಚಾರ ಬಹಿರಂಗವಾಗಿದ್ದು, ತನಿಖೆಯಲ್ಲಿ ಅವರೇ ಕಾರಿಗೆ ಬೆಂಕಿಯಿಟ್ಟಿರುವುದು ಸಾಬೀತಾಗಿದೆ.
ಸತೀಶ್ ಅವರ ಪತ್ನಿ ಚಿನ್ನಾಭರಣ ಕೊಡಿಸಬೇಕೆಂದು ತುಂಬಾ ದಿನಗಳಿಂದ ಪೀಡಿಸುತ್ತಿದ್ದರು. ಆದರೆ, ಹಣದ ಕೊರತೆಯಿದ್ದಿದ್ದರಿಂದ ಆಸೆಯನ್ನು ಈಡೇರಿಸಲು ಸಾಧ್ಯವಾಗಿರಲಿಲ್ಲ ಆದ್ದರಿಂದ ಕಾರಿಗೆ ಬೆಂಕಿ ಹಚ್ಚಿ ಸುಟ್ಟರೆ, ಸುಟ್ಟು ಹೋದ ಕಾರಿಗೆ ಬರುವ ವಿಮಾ ಪರಿಹಾರದ ಹಣದಲ್ಲಿ ಪತ್ನಿಗೆ ಆಭರಣ ಕೊಡಿಸ ಬಹುದು ಎಂದು ಅವರು ಈ ಯೋಚನೆ ಮಾಡಿದ್ದರು.
ಅದರಂತೆ ಒಂದು ರಾತ್ರಿ, ತಮ್ಮ ನಿವಾಸದ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿಯಿಟ್ಟು ಮನೆಯೊಳಗೆ ಹೋಗಿದ್ದರು. ಯಾರೋ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ಹೋಗಿ ತಮ್ಮ ಕಾರು ಸುಟ್ಟು ಹೋಗಿದೆ ಎಂದು ಪೊಲೀಸರಲ್ಲಿ ದೂರು ಸಲ್ಲಿಸಿದ್ದರು. ದೂರಿನ ಆಧಾರದಲ್ಲಿ ತನಿಖೆ ನಡೆಸಲು ಮುಂದಾದ ಪೊಲೀಸರು, ಸತೀಶ್ ಅಕ್ಕಪಕ್ಕದ ಮನೆಗಳ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸತೀಶ್ ಅವರೇ ಕಾರಿಗೆ ಬೆಂಕಿಯಿಟ್ಟಿರುವುದು ತಿಳಿದುಬಂದಿದೆ. ಇದೀಗ ಸುಳ್ಳು ದೂರು ದಾಖಲಿಸಿದ ಆರೋಪದಡಿ ಅವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. | |