ಎಂಎಸ್ಇಝಡ್‌ ಫಿಶ್‌ ಮೀಲ್‌ ಕಾರ್ಖಾನೆ ದುರಂತ: ಮೃತರ ಸಂಖ್ಯೆ ಐದಕ್ಕೆ ಏರಿಕೆ

ಕಡತ ಚಿತ್ರ

ಮಂಗಳೂರು, ಎ.18 : ಇಲ್ಲಿನ ಎಂಎಸ್ಇಝಡ್‌ (ಮಂಗಳೂರು ವಿಶೇಷ ಆರ್ಥಿಕ ವಲಯ)ನಲ್ಲಿರುವ ಫಿಶ್‌ ಮೀಲ್‌ ಕಾರ್ಖಾನೆಯೊಂದರಲ್ಲಿ  ನಿನ್ನೆ ರಾತ್ರಿ ನಡೆದ ದುರಂತಕ್ಕೆ ಸಂಬಂಧಿಸಿ ಮೃತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಈ ಮೀನು ಸಂಸ್ಕರಣಾ ಕಂಪೆನಿಯ ತ್ಯಾಜ್ಯ ಸಂಗ್ರಹ ತೊಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ದುರಂತದಲ್ಲಿ ತೀವ್ರ ಅಸ್ವಸ್ಥ ಗೊಂಡಿದ್ದ ಮಿರಾಜುಲ್ ಇಸ್ಲಾಂ ಮತ್ತು ಶರಾಫತ್ ಆಲಿ ಎಂಬವರು ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ. ಇನ್ನು ಹಸನ್ ಅಲಿ, ಮುಹಮ್ಮದ್ ಕರೀಮುಲ್ಲಾ ಮತ್ತು ಹಫೀಝುಲ್ಲಾ ಎಂಬವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೃತರು ಹಾಗೂ ಅಸ್ವಸ್ಥಗೊಂಡಿರುವ ಕಾರ್ಮಿಕರೆಲ್ಲರೂ ಪಶ್ಚಿಮ ಬಂಗಾಳ ಮೂಲದವರಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, ನಿನ್ನೆ ರಾತ್ರಿ ಮೀನು ಸಂಸ್ಕರಣಾ ಕಂಪೆನಿಯ ತ್ಯಾಜ್ಯ ಸಂಗ್ರಹ ತೊಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನಿಝಾಮುದ್ದೀನ್ ಎಂಬವರು ಮೊದಲು ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಉಳಿದ ಏಳು ಮಂದಿ ಆತನ ರಕ್ಷಣೆಗಾಗಿ ತೊಟ್ಟಿಗೆ ಇಳಿದ ಕಾರಣ ಅವರೂ ಅಪಾಯಕ್ಕೆ ಸಿಲುಕಿದ್ದರು. ‌ದುರಂತದಲ್ಲಿ ಸಮೀರುಲ್ ಇಸ್ಲಾಂ, ಉಮರ್ ಫಾರೂಕ್ ಹಾಗೂ ನಿಝಾಮುದ್ದೀನ್ ಸಾಬ್ ಎಂಬವರು ನಿನ್ನೆ ರಾತ್ರಿಯೇ ಮೃತಪಟ್ಟಿದ್ದರು. 

ಹಾಗೂ ಮೃತಪಟ್ಟವರ ಬಗ್ಗೆ ಅವರ ಸಂಬಂಧಿಕರಿಗೆ ಮಾಹಿತಿ ನೀಡಿದ್ದು,ಮೃತದೇಹಗಳನ್ನು ಮಂಗಳೂರಿನ ಎಜೆ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಶವಪರೀಕ್ಷೆ ನಡೆಸಿ ಮೃತರ ವಾರಸುದಾರರಿಗೆ ಹಸ್ತಾಂತರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ರಾಸಾಯನಿಕ ಬಳಕೆಯಾಗಿದೆಯೇ ಎಂಬ ಕುರಿತಂತೆ ಸಂಬಂಧ ಪಟ್ಟವರು ಮಾಹಿತಿ ನೀಡಲಿದ್ದಾರೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!